ಸಿದ್ದಾಪುರ ತಾಲೂಕಿನ ವಾಜಗದ್ದೆಯಲ್ಲಿ ಏರ್ಪಡಿಸಿದ್ದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕೆ.ಜಿ.ನಾಗರಾಜ ಮಾತನಾಡಿದರು. ಎಂ.ಆರ್. ಕುಲಕರ್ಣಿ, ಜಿ.ಜಿ. ಹೆಗಡೆ, ಚಂದ್ರಶೇಖರ ನಾಯ್ಕ, ಸಿ.ಎಸ್. ಗೌಡರ್ ಇತರರಿದ್ದರು.
ಸಿದ್ದಾಪುರ: ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಾಲಯದ ಸಭಾಂಗಣದಲ್ಲಿ ಜ.3ರಂದು ಜರುಗಲಿರುವ ಎಂಟನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ನಡೆಯುವಂತಾಗಬೇಕು. ಅದಕ್ಕೆ ಎಲ್ಲರ ಸಹಕಾರ ಅವಶ್ಯ ಎಂದು ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಹೇಳಿದರು.
ವಾಜಗದ್ದೆಯ ದುರ್ಗಾವಿನಾಯಕ ದೇವಾಲಯದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ದುರ್ಗಾವಿನಾಯಕ ದೇವಾಲಯದ ಆಡಳಿತ ಮಂಡಳಿ, ಯುವಕ ಸಂಘ, ಮಹಿಳಾ ಸಂಘ ವಾಜಗದ್ದೆ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಎಲ್ಲ ಇಲಾಖೆಗಳು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಒಳಗೊಂಡು ನಡೆಯುವ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನವು ನೆನಪಿಡುವಂತಹ ಸಮ್ಮೇಳನ ಆಗಬೇಕು ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜರುಗುವ ಈ ಸಮ್ಮೇಳನಕ್ಕೆ ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ತಯಾರಿ ಕುರಿತು ಉಪ ಸಮಿತಿ ರಚಿಸಲಾಯಿತು. ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ, ಕೋಶಾಧ್ಯಕ್ಷ ಪಿ.ಬಿ.ಹೊಸೂರ, ಗೌರವ ಕಾರ್ಯದರ್ಶಿಗಳಾದ ಅಣ್ಣಪ್ಪ ನಾಯ್ಕ ಶಿರಳಗಿ, ಪ್ರಶಾಂತ ಡಿ. ಶೇಟ್, ಟಿ.ಕೆಎಂ ಆಜಾದ್, ಕಸಾಪ ನಿಕಟ ಪೂರ್ವ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಶ್ರೀ ದುರ್ಗಾವಿನಾಯಕ ದೇವಾಲಯದ ಮೊಕ್ತೇಸರ ಎಸ್.ಎಂ. ಹೆಗಡೆ ಪೆಟೇಸರ ಹಾಗೂ ಸದಸ್ಯರು, ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸೂಳಗಾರ ವಂದಿಸಿದರು. ತಾಲೂಕು ಪತ್ರಕರ್ತ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ನಿರ್ವಹಿಸಿದರು.