ಯಲ್ಲಾಪುರದ ರೈತಭವನದಲ್ಲಿ ಗ್ರಾಮದೇವಿ ಜಾತ್ರೆಯ JATREಪೂರ್ವಭಾವಿ ಸಭೆ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಲ್ಲಾಪುರ: ಬರುವ ಫೆ. 11ರಿಂದ 19ರವರೆಗೆ ಜರುಗಲಿರುವ ಗ್ರಾಮದೇವಿ ಜಾತ್ರೆಯ (Jatre) ಪೂರ್ವಭಾವಿ ಸಭೆ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ವಾಹನಗಳ ಸಂಚಾರವನ್ನು ಹಂತಹಂತವಾಗಿ ಏಕಮುಖವಾಗಿ ಸಂಚರಿಸಲು ವ್ಯವಸ್ಥೆ ಮಾಡಿಕೊಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಹೆಚ್ಚುವರಿಯಾಗಿ ಮೊಬೈಲ್ ಶೌಚಗೃಹಗಳ ವ್ಯವಸ್ಥೆ ಮಾಡಿಕೊಡಬೇಕು. ಫೆ. 8ರಿಂದ 22ರವರೆಗೆ ಪ್ರತಿನಿತ್ಯ ಕುಡಿಯುವ ನೀರಿನ ಸರಬರಾಜು ಮಾಡಬೇಕು.
ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಆರೋಗ್ಯ ಇಲಾಖೆಯವರು ತುರ್ತು ಚಿಕಿತ್ಸೆಗೆ ತಾತ್ಕಾಲಿಕ ಘಟಕ ರಚಿಸಿ, ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಕಲ್ಪಿಸಿ. ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆರೋಗ್ಯ ಇಲಾಖೆಗೆ ಶಾಸಕರು ಸೂಚಿಸಿದರು.
ಗ್ರಾಮೀಣ ಭಾಗಗಳಿಗೆ ಅಗತ್ಯವಿರುವಲ್ಲಿ ವಿಶೇಷ ಬಸ್ ಓಡಿಸಬೇಕು. ಹೆಚ್ಚುವರಿ ಬಸ್‌ಗಳು ಅಗತ್ಯವಿದ್ದರೆ ಹೊರಗಿನಿಂದ ತರಿಸಿಕೊಳ್ಳುವಂತೆ ಬಸ್ ಘಟಕದ ಅಧಿಕಾರಿಗಳಿಗೆ ತಿಳಿಸಿದರು.
ಅಮ್ಯೂಸ್‌ಮೆಂಟ್ ಪಾರ್ಕ್, ಮನರಂಜನೆ ವಿಚಾರದಲ್ಲಿ ಜನರಿಗೆ ತೊಂದರೆಯಾಗದಂತೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನವರಿ 3 ರಂದು ಮುಂದಿನ ಹಂತದ ಸಿದ್ಧತೆ ಬಗ್ಗೆ ಪಟ್ಟಣ ಪಂಚಾಯಿತಿಯಲ್ಲಿ ಸಭೆ ನಡೆಸಲಾಗುವುದು ಎಂದರು.
ಗ್ರಾಮದೇವಿ ದೇವಸ್ಥಾನದ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಹೆಬ್ಬಾರ, ಫುಟ್ಪಾತ್ ಮೇಲಿನ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ. ಜಾತ್ರೆ ವಿಷಯದಲ್ಲಿ ಯಾರೂ ರಾಜಕೀಯ ಮಾಡಬೇಡಿ ಎಂದರು.
ಎಲ್ಲ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಅಧಿಕಾರಿಗಳು ಕಾನೂನು ಪುಸ್ತಕ ಬದಿಗಿಟ್ಟು, ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು.
ಜನರಿಗೆ ತೊಂದರೆಯಾದರೆ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಸಿಪಿಐ ರಮೇಶ ಹಾನಾಪುರ ಮಾತನಾಡಿ, ಜಾತ್ರೆಯಲ್ಲಿ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ.
ಸಂಜೆಯ ನಂತರ ರಾತ್ರಿಯವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು.
ಸಣ್ಣ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
ಜಾತ್ರೆಗೆ ಬರುವ ವಾಹನಗಳಿಗೆ ಪಟ್ಟಣದ ಮದರ್ ತೆರೆಸಾ ಬಳಿಯ ಮೈದಾನ, ಉರ್ದು ಶಾಲೆ ಮೈದಾನ, ಎಪಿಎಂಸಿ ಆವಾರ, ಅರಣ್ಯ ಇಲಾಖೆಯ ಸಸ್ಯೋದ್ಯಾನ ಮುಂತಾದೆಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಡಿವೈಎಸ್‌ಪಿ ಗೀತಾ ಪಾಟೀಲ, ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಇತರರಿದ್ದರು.
ಜೂಜಾಟಕ್ಕೆ ಅವಕಾಶ ನೀಡಬೇಡಿ
ಕಳೆದ ಜಾತ್ರೆಯಲ್ಲಿ ಜೂಜಾಟದಿಂದಾಗಿ ಊರಿಗೇ ಕೆಟ್ಟ ಹೆಸರು ಬರುವಂತಾಗಿತ್ತು. ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಜೂಜಾಟಕ್ಕೆ ಅವಕಾಶ ಕೊಡಬಾರದೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂತು.
ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ ಮಾತನಾಡಿ, ಹಿಂದಿನ 10 ಜಾತ್ರೆಗಳಿಂದಲೂ ಜೂಜಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ.
ಕಳೆದ ಜಾತ್ರೆಯಲ್ಲಿ ಜೂಜಾಟ ಜೋರಾಗಿಯೇ ನಡೆದಿರುವುದು ಬಹಿರಂಗ ಸತ್ಯ. ದೇವಸ್ಥಾನದ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.
ಈ ಬಾರಿ ಜೂಜಾಟ ನಡೆಯದಂತೆ ಕಟ್ಟುನಿಟ್ಟಾಗಿ ಕ್ರಮ ಆಗಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಗಂಭೀರವಾಗಿ ಗಮನ ಹರಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.