ಈಜು ತರಬೇತಿ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹಾಗೂ ವಿದ್ಯಾರ್ಥಿಗಳು.
- ಪತ್ರಕರ್ತ ರಾಮಚಂದ್ರ ಕಿಣಿ ಸಲಹೆ
- ಈಜು ತರಬೇತಿ ಶಿಬಿರ ಸಮಾರೋಪ
ಭಟ್ಕಳ: ಈಜು ಕೇವಲ ಕ್ರೀಡೆ ಅಲ್ಲ, ಜೀವ ಉಳಿಸುವ ಮಹತ್ವದ ಕೌಶಲವಾಗಿದೆ. ಸ್ವಸ್ಥ ಶರೀರ, ಆರೋಗ್ಯಯುತವಾದ ಮನಸಿಗೆ ಇದು ಉತ್ತಮ ಸಾಧನವಾಗಿದೆ ಎಂದು ಪತ್ರಕರ್ತ ರಾಮಚಂದ್ರ ಕಿಣಿ ಹೇಳಿದರು.
ಪಟ್ಟಣದ ಶೋಟೋಕಾನ್ ಕರಾಟೆ ಇನ್‌ಸ್ಟಿಟ್ಯೂಟ್ ವತಿಯಿಂದ ಕಳೆದ 10 ದಿನಗಳಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈಜು ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಬೆಳೆಸುವುದಲ್ಲದೆ, ಅಪಘಾತಗಳನ್ನು ತಪ್ಪಿಸುವಲ್ಲಿ ಸಹಕಾರಿಯಾಗುತ್ತದೆ. ಸಮುದ್ರ ತೀರ ಪ್ರದೇಶವಾದ ಭಟ್ಕಳದಲ್ಲಿ ಪ್ರತಿಯೊಬ್ಬರೂ ಈಜು ಕಲಿಯುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ದಂತ ವೈದ್ಯ ಡಾ. ರವಿ ಮಾತನಾಡಿ, ಭಟ್ಕಳದಲ್ಲಿ ಶಾಶ್ವತ ಈಜುಕೊಳದ ಕೊರತೆ ಇರುವುದನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕ ಈಜುಕೊಳ ನಿರ್ಮಾಣ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗೆ ಮನವಿ ನೀಡಬೇಕು ಎಂದರು.
ಯುವ ತರಬೇತುದಾರ ಆರ್ಯನ್ ನಾಯ್ಕ ಮಾತನಾಡಿ, ಈಜು ಕಲಿಯುವಲ್ಲಿ ನಿಯಮಿತ ಅಭ್ಯಾಸ ಮತ್ತು ಆತ್ಮವಿಶ್ವಾಸ ಮುಖ್ಯ ಎಂದರು. ನ್ಯೂ ಇಂಗ್ಲಿಷ್ ಶಾಲೆಯ ಶಿಕ್ಷಕ ಶರತ್ ಮಾತನಾಡಿ, ವಿದ್ಯಾರ್ಥಿಗಳು ಶಾರೀರಿಕ ಕೌಶಲಗಳ ಜೊತೆಗೆ ಮಾನಸಿಕ ದೃಢತೆ ಬೆಳೆಸಿಕೊಳ್ಳಬೇಕು ಎಂದರು.
ಕರಾಟೆ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಸುರೇಶ ಮೊಗೇರ, ಪೊಲೀಸ್ ಸಿಬ್ಬಂದಿ ಗಂಗಾ ನಾಯ್ಕ ಇತರರು ಉಪಸ್ಥಿತರಿದ್ದರು. ಈಜು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ನಾಗರಾಜ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.