ಚಿರಾಗ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. 
ಉತ್ತರ ಕನ್ನಡ

ಆತ್ಮಹತ್ಯೆ ಪ್ರಚೋದನ ಆರೋಪಿ ಚಿರಾಗ್‌ ಪೊಲೀಸ್‌ ವಶಕ್ಕೆ

ಕಾರವಾರ: ಕದ್ರಾದ ಯುವತಿ ರೀಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಆರೋಪಿ ಚಿರಾಗ್ ಕೊಠಾರಕರ್‌ನನ್ನು ಹೆಚ್ಚಿನ ತನಿಖೆ ಹಾಗೂ ಸ್ಥಳ ಮಹಜರಿಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೀಶೆಲ್ ಡಿಸೋಜಾಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣನಾಗಿದ್ದಾನೆ ಎಂದು ಮೃತಳ ತಂದೆ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆರೋಪಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಹುಟುಕಾಟಕ್ಕಾಗಿ ಮೂವರು ಇನ್ಸ್ಪೆಕ್ಟರ್‌ಗಳು, 6 ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ನಿಯೋಜಿಸಲಾಗಿತ್ತು. ಆತನನ್ನು ಚೆನ್ನೈನಲ್ಲಿ ಬಂಧಿಸಿ ಕರೆತಂದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
ಆರೋಪಿಗೆ ಸಹಕಾರ ನೀಡಿದ ಆರೋಪದ ಮೇಲೆ ಚಿರಾಗ್ ಚಿಕ್ಕಮ್ಮ ಸುವರ್ಣಾ, ಚಿಕ್ಕಪ್ಪ ನಿತಿನ್ ಗಾಂವಕರ್ ವಿರುದ್ಧವೂ ದೂರು ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಅಲ್ಲದೇ, ಆತನಿಗೆ ಸಹಕಾರ ನೀಡಿದ ಎಲ್ಲರನ್ನೂ ಮುಂದಿನ ದಿನದಲ್ಲಿ ವಿಚಾರಣೆ ನಡೆಸಲಾಗುವುದು ಎಂದರು.
ಮೃತಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಆಕೆಯ ತಾಯಿ ದೂರು ನೀಡಿದ್ದಾರೆ. ಮಂಗಳೂರು ಹಾಗೂ ಧಾರವಾಡದ ತಜ್ಞ ವೈದ್ಯರು ಬಂದು ಮರು ಮರಣೋತ್ತರ ಪರೀಕ್ಷೆ ನಡೆಸಿ, ಮಾದರಿಗಳನ್ನು ಪಡೆದಿದ್ದಾರೆ. ವಿಧಿ ವಿಜ್ಞಾನ ವಿಶ್ಲೇಷಣಾ ವರದಿ ಬರುವುದು ಬಾಕಿ ಇದೆ. ಆ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಆತ್ಮಹತ್ಯೆ ಪ್ರಕರಣದಲ್ಲಿ ಪಂಚನಾಮೆ ನಿಯಮಗಳನ್ನು ಪಾಲಿಸದ ಆರೋಪದ ಮೇಲೆ ಕದ್ರಾ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದರು.