ಅರಬ್ಬಿ ಸಮುದ್ರದ ನಡುವಿನ ದ್ವೀಪ
ಅರಬ್ಬಿ ಸಮುದ್ರದ ನಡುವೆ ಇರುವ ದ್ವೀಪಗಳನ್ನು ಸರ್ವೇ ಮಾಡಿ ಅವುಗಳನ್ನು ಕಂದಾಯ ದಾಖಲೆಗೆ ಸೇರಿಸಿಕೊಳ್ಳಲಾಗುತ್ತಿದೆ. ಕಾರವಾರ ತಾಲೂಕಿನ 4 ಹಾಗೂ ಭಟ್ಕಳ ತಾಲೂಕಿನ 2 ಸೇರಿ ಒಟ್ಟು 6 ದ್ವೀಪಗಳ 101 ಎಕರೆ ಜಮೀನಿಗೆ ಕಂದಾಯ ದಾಖಲೆ ನೀಡಲು ಮೊದಲ ಅಧಿಸೂಚನೆ ಹೊರಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಿಂದ ಭಟ್ಕಳವರೆಗೆ ಅರಬ್ಬಿ ಸಮುದ್ರದ ನಡುವೆ ಒಟ್ಟು 63 ದ್ವೀಪಗಳಿವೆ. ಕಾರವಾರದ ಕೂರ್ಮಗಡ ದ್ವೀಪ ಬಿಟ್ಟರೆ ಬರ‍್ಯಾವುದೇ ದ್ವೀಪಗಳು ಕಂದಾಯ ದಾಖಲೆಯಲ್ಲಿ ಸೇರಿಲ್ಲ. ಅವುಗಳಿಗೆ ಸರ್ವೇ ನಂಬರ್ ಕೂಡ ಇಲ್ಲ. ಜನವಸತಿಯೂ ಇಲ್ಲ. ಈಗ ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆದು, ಭೂ ದಾಖಲೆಗಳ ಇಲಾಖೆಯಿಂದ ಸೆಟಲೈಟ್ ಇಮೇಜ್ ಹಾಗೂ ರೋವರ್ ಬಳಸಿ ಆಧುನಿಕ ತಂತ್ರಜ್ಞಾನದಲ್ಲಿ ಸರ್ವೇ ಕಾರ್ಯವನ್ನು ಡಿಡಿಎಲ್‌ಆರ್ ಸಂದೀಪ ಉಪ್ಪಾರ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ.
ಸರ್ವೇ ದಾಖಲೆಗಳನ್ನು ಆಧರಿಸಿ ಭೂ ದಾಖಲೆಗಳ ಇಲಾಖೆ ಜಂಟಿ ನಿರ್ದೇಶಕರು ಮಾರ್ಚ್ 20 ರಂದು ಆದೇಶ ಹೊರಡಿಸಿದ್ದರು. ಆ ದಾಖಲೆಗಳ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 127(3) ಮತ್ತು ಕರ್ನಾಟಕ ಭೂ ಕಂದಾಯ ನಿಯಮಾವಳಿ 1966 ರ ನಿಯಮ 61 ರಂತೆ ಉತ್ತರ ಕನ್ನಡ ಜಿಲ್ಲಾಽಕಾರಿಗಳು ಏಪ್ರಿಲ್ 10 ರಂದು ಅಧಿಸೂಚನೆ ಹೊರಡಿಸಿದ್ದಾರೆ. 30 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನಿಗದಿತ ಕಾಲಾವಧಿಯ ನಂತರ ಅಂತಿಮ ಅಧಿಸೂಚನೆ ಹೊರಡಿಸಿ, ದ್ವೀಪಗಳಿಗೆ `ಬ' ಖರಾಬ ಸರ್ವೇ ನಂಬರ್ ನೀಡಿ ಕಂದಾಯ ದಾಖಲೆಗಳಲ್ಲಿ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಚಟುವಟಿಕೆ
ದ್ವೀಪ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮುಂದಾಗಿರುವ ಕರ್ನಾಟಕ ಜಲಸಾರಿಗೆ ಮಂಡಳಿಯು, ಬಂದರು ಸಚಿವ ಮಂಕಾಳ ವೈದ್ಯ ಅವರ ಸೂಚನೆಯಂತೆ. ದ್ವೀಪಗಳಿಗೆ ಕಂದಾಯ ದಾಖಲೆ ಒದಗಿಸುವಂತೆ ಜಿಲ್ಲಾಽಕಾರಿ ಅವರಿಗೆ ಮನವಿ ಮಾಡಿತ್ತು. ಅದರ ಆಧಾರದ ಮೇಲೆ ಸರ್ವೇ ಕಾರ್ಯ ನಡೆಸಿ, ಅವುಗಳಿಗೆ ಸರ್ವೇ ನಂಬರ್ ನೀಡುವ ಕೆಲಸ ನಡೆಯುತ್ತಿದೆ. ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಮುಂದೆ ಖಾಸಗಿ ಸಂಸ್ಥೆಗಳಿಗೆ ನೀಡುವ ಯೋಜನೆ ಹೊಂದಲಾಗಿದೆ ಎಂದು ಬಂದರು ಅಽಕಾರಿಗಳು ತಿಳಿಸಿದ್ದಾರೆ.
ಸೇರ್ಪಡೆಯಾಗುವ ದ್ವೀಪಗಳು
- *ಕೋಡಿಬಾಗ ಗ್ರಾಮದ ಮಧ್ಯಲಿಂಗದ ದ್ವೀಪ-12 ಎಕರೆ 31 ಗುಂಟೆ-ಸರ್ವೇ ನಂಬರ್ 295
- *ಬೈತಖೋಲ್ ಗ್ರಾಮದ ಮೊಂಗೇರಗುಡ್ಡ ದ್ವೀಪ-13 ಎಕರೆ 09 ಗುಂಟೆ -ಸರ್ವೇ ನಂಬರ್-98
- *ಭೈತಖೋಲ್ ಗ್ರಾಮದ ದೇವಗಢ-1 ದ್ವೀಪ -21 ಎಕರೆ 09 ಗುಂಟೆ ಸರ್ವೇ ನಂಬರ್-99
- *ಬೈತಖೋಲ್ ಗ್ರಾಮದ ದೇವಗಢ-2 ದ್ವೀಪ-11 ಎಕರೆ 38 ಗುಂಟೆ ಸರ್ವೇ ನಂಬರ್-100
- *ಹೆಬಳೆ ಗ್ರಾಮದ ಜಾಲಿಕುಂಡ ಗುಡ್ಡ ದ್ವೀಪ-34 ಎಕರೆ 24 ಗುಂಟೆ -ಸರ್ವೇ ನಂಬರ್- 433
- *ಶಿರಾಲಿ ಗ್ರಾಮದ ಕಿರಿಕೊಂಡ ಗುಡ್ಡ ದ್ವೀಪ -7 ಎಕರೆ 27 ಗುಂಟೆ-ಸರ್ವೇ ನಂಬರ್ -1079
"
ಸರ್ಕಾರದ ಅನುಮತಿ ಪಡೆದು, ದ್ವೀಪಗಳ ಸರ್ವೇ ನಡೆಸಲಾಗಿದೆ. ಅವುಗಳಿಗೆ ಸರ್ವೇ ನಂಬರ್ ನೀಡಿ, ಕಂದಾಯ ದಾಖಲೆಗಳಲ್ಲಿ ಸೇರಿಸುವ ಸಂಬಂಧ ಜಿಲ್ಲಾಧಿಕಾರಿ ಅವರು ಮೊದಲ ಅಽಸೂಚನೆ ಹೊರಡಿಸಿದ್ದಾರೆ.
ಸಂದೀಪ ಉಪ್ಪಾರ ಡಿಡಿಎಲ್‌ಆರ್ ಕಾರವಾರ