ಕಾರವಾರದದಲ್ಲಿ ಸಚಿವ ಮಂಕಾಳ ವೈದ್ಯ ಧ್ವಜಾರೋಹಣ ನೆರವೇರಿಸಿದರು.  
ಉತ್ತರ ಕನ್ನಡ

ಈ ಬಜೆಟ್‌ನಲ್ಲಿ ಕಾರವಾರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಖಚಿತ : ಮಂಕಾಳ ವೈದ್ಯ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ : ಕ್ರಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ಸಿಎಂ ಒಪ್ಪಿದ್ದು, ಬರುವ ಬಜೆಟ್‌ನಲ್ಲಿ ಘೋಷಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಜಿಲ್ಲಾಡಳಿತದಿಂದ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರವಾರ ಕ್ರಿಮ್ಸ್ನಲ್ಲಿ ಈಗಾಗಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೆ. ಕ್ಯಾನ್ಸರ್ ಚಿಕಿತ್ಸಾ ಘಟಕ, ಎಂಆರ್‌ಐ ಸೌಲಭ್ಯ ಪ್ರಕ್ರಿಯೆ ಪ್ರಗತಿಯಲ್ಲಿದೆ. 260 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಮೂಲ ಸೌಕರ್ಯಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ತಜ್ಞ ವೈದ್ಯರು ಬರಲು ಒಪುತ್ತಿಲ್ಲ. ಅದಕ್ಕೆ ಪರಿಹಾರ ಹುಡುಕಬೇಕಿದೆ ಎಂದರು.
ಭಾರತದ ಸಂವಿಧಾನವು ಜಗತ್ತಿನಲ್ಲಿ ಸುದೀರ್ಘ, ವಿಸ್ತ್ರತ, ಪರಿಪೂರ್ಣ ಮತ್ತು ನ್ಯಾಯ ಸಮ್ಮತ ಸಂವಿಧಾನವಾಗಿದೆ. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಬಡವರಿಗೆ ಅವಕಾಶ ಕಲ್ಪಿಸಬೇಕು ಎಂಬುದು ಸಂವಿಧಾನದ ಆಶಯ ಅದನ್ನು ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಪಂಚ ಗ್ಯಾರಂಟಿಗಳನ್ನು ಒದಗಿಸುತ್ತಿದೆ. ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದೆವೆ ಎಂದರು.
ಶಾಸಕ ಸತೀಶ ಸೈಲ್, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್., ಡಿಎಫ್‌ಒ ಸಿ.ರವಿಶಂಕರ್ ಇತರರು ಇದ್ದರು. ಪೊಲೀಸ್, ಗೃಹರಕ್ಷಕ, ಅರಣ್ಯ, ಎನ್‌ಸಿಸಿ, ಭಾರತ ಸೇವಾದಳ ಸೇರಿ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ನಂತರ ಶಿರವಾಡದ ಕೆಪಿಎಸ್ ಪ್ರೌಢಶಾಲೆ, ಅಮದಳ್ಳಿಯ ಎಜುಕೇರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಸೇಂಟ್ ಮೈಕಲ್ ಪ್ರೌಢಶಾಲೆಯಿಂದ ಸಾಮೂಹಿಕ ನೃತ್ಯ ರೂಪಕಗಳು ಗಮನ ಸೆಳೆದವು.