ಗೋಕರ್ಣದ (Gokarna) ಪುರಾಣ ಖ್ಯಾತ ಮಹಾಬಲೇಶ್ವರ ಮಂದಿರ ಗರ್ಭಗುಡಿ ಜಲಾವೃತ ಸಮಸ್ಯೆ ಸಂಬಂಧ ಜಿಪಂ ಸಿಇಒ ದಿಲೀಷ್ ಶಶಿ ನೇತೃತ್ವದಲ್ಲಿ ವಿವಿಧ ಇಲಾಖೆ ಇಂಜಿನಿಯರ್ ಮತ್ತು ಅಧಿಕಾರಿಗಳು ಸೋಮವಾರ ಮಂದಿರದ ತೀರ್ಥನಾಲೆ ಹಾಗೂ ಪರಿಸರದ ಪರಿಶೀಲನೆ ಮಾಡಿದರು. ಕುಮಟಾ ಎಸಿ ಶ್ರವಣಕುಮಾರ್, ಇಂಜಿನಿಯರ್‌ಗಳಾದ ಶಿವರಾಮ ನಾಯ್ಕ, ಅಜಯ ಪ್ರಭು, ರಾಘವೇಂದ್ರ ನಾಯ್ಕ, ಸೂರ್ಯನಾರಾಯಣ ಭಟ್ಟ, ಗಣೇಶ ನಾಯಕ, ವಿ.ಎ. ಪಟಗಾರ ಇತರರಿದ್ದರು.
- ಜಿಪಂ ಸಿಇಒ ದಿಲೀಷ್ ಶಶಿ ನೇತೃತ್ವ
- ಶ್ರೀ ಮಹಾಬಲೇಶ್ವರ ಮಂದಿರ ತೀರ್ಥನಾಲೆ ಪರಿಶೀಲನೆ
- ಸಮಗ್ರ ಯೋಜನೆಯ ನೀಲಿನಕ್ಷೆ ಶೀಘ್ರ ರೂಪಿಸಲು ಸೂಚನೆ
ಗೋಕರ್ಣ: ಶ್ರೀ ಮಹಾಬಲೇಶ್ವರ ಮಂದಿರದ ಗರ್ಭಗುಡಿ (gokarna) ಭಾರೀ ಮಳೆಯ ವೇಳೆ ಜಲಾವೃತವಾಗುತ್ತಿರುವ ಸಂಬಂಧ ಜಿಪಂ ಸೇರಿದಂತೆ ಜಿಲ್ಲೆಯ ಇನ್ನಿತರ ಇಲಾಖೆ ಇಂಜಿನಿಯರ್ ಮೂಲಕ ಸ್ಥಳ ಪರಿಶೀಲನೆ ಮಾಡಲಾಗಿದೆ.
ಮಂದಿರದ ಗರ್ಭಗುಡಿಯಿಂದ ಪೂಜಾತೀರ್ಥವನ್ನು ಹೊರಕ್ಕೆ ಸಾಗಿಸುವ ಸೋಮಸೂತ್ರ ನಾಲೆ ಮತ್ತು ಅಂತಿಮವಾಗಿ ಪೂಜಾತೀರ್ಥ ಹೋಗಿ ಸೇರುವ ಸಮುದ್ರ ತೀರದ ಸಂಗಮ ನಾಲೆಯ ವರ್ತಮಾನದ ಪರಿಸ್ಥಿತಿಯನ್ನು ಪರಿವೀಕ್ಷಿಸಲಾಗಿದೆ.
ಗರ್ಭಗುಡಿ ಜಲಬಂಧನಕ್ಕೆ ಒಳಗಾಗುವುದನ್ನು ನಿರ್ಬಂಧಿಸಲು ತಕ್ಷಣದಲ್ಲಿ ಯೋಜನೆಯ ನೀಲಿನಕ್ಷೆ ರೂಪಿಸಲು ಸಂಬಂಧಿಸಿದ ಎಲ್ಲ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಷ್ ಶಶಿ ತಿಳಿಸಿದ್ದಾರೆ.
ಸೋಮವಾರ ವಿವಿಧ ಇಲಾಖಾ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳ ಜತೆ ಮಂದಿರ ಪರಿಸರದ ಸಂಪೂರ್ಣ ಅವಲೋಕನ ನಡೆಸಿ ಅವರು ಮಾತನಾಡಿದರು.
ಗರ್ಭಗುಡಿಯ ಪೂಜಾಜಲದ ಜತೆಗೆ ಮಂದಿರದ ಒಳ ಪ್ರಾಕಾರದ ಮಳೆ ನೀರು ಕೂಡ ಒಂದೇ ನಾಲೆಯ ಮೂಲಕ ಹೊರಗೆ ಸಾಗಿಸಲಾಗುತ್ತಿದೆ.
ಭಾರೀ ಮಳೆಯ ಸಂದರ್ಭದಲ್ಲಿ ಪೂಜಾತೀರ್ಥಕ್ಕಿಂತ ಹಲವು ಪಟ್ಟು ಹೆಚ್ಚು ಪ್ರಮಾಣದಲ್ಲಿ ಸುರಿಯುವ ಮಳೆ ನೀರು ನಾಲೆಯ ಮೂಲಕ ಹೋಗುತ್ತದೆ.
ಇದರೊಂದಿಗೆ ತೀವ್ರವಾದ ಮಳೆ ಮತ್ತು ಸಮುದ್ರದ ಉಬ್ಬರದ ವೇಳೆ ಸಂಗಮ ನಾಲೆಯ ನೀರು ಸಮುದ್ರವನ್ನು ಸೇರಲಾಗದೆ ಹಿಮ್ಮುಖವಾಗಿ ಚಲಿಸಿ ಮಂದಿರದ ತೀರ್ಥ ಮತ್ತು ಮಳೆ ನೀರು ಹೊರಬಾರದಂತೆ ಒತ್ತಡ ಉಂಟುಮಾಡಿ ಗರ್ಭಗುಡಿಯಲ್ಲಿಯೇ ನೀರು ನಿಲ್ಲಲು ಕಾರಣವಾಗುತ್ತದೆ.
ಈ ಹಿನ್ನೆಲೆಯಲ್ಲಿ ಗರ್ಭಗುಡಿಯ ನೀರು ಮತ್ತು ಮಳೆ ನೀರಿನ ಸಾಗಾಟವನ್ನು ಪ್ರತ್ಯೇಕಿಸುವುದು ಮತ್ತು ಪೂಜಾತೀರ್ಥವನ್ನು ಒಯ್ಯುವ ಸೋಮಸೂತ್ರ ನಾಲೆ ಸಂಗಮ ನಾಲೆ ಸಂಧಿಸುವ ಸ್ಥಳದಲ್ಲಿ ಈ ಹಿಂದಿನ ಪುರಾತನ ವ್ಯವಸ್ಥೆಯಂತೆ ಜಂತ್ರಡಿ ನಿರ್ಮಿಸಿ ಮಂದಿರ ಮತ್ತು ಸಂಗಮ ನಾಲೆಯ ನೀರನ್ನು ನಿಯಂತ್ರಿಸುವ ಕುರಿತು ಕೂಡ ಪರಿಶೀಲನೆ ವೇಳೆ ಚರ್ಚಿಸಲಾಯಿತು.
ಗಟಾರ ತೆರೆಯಲು ಸೂಚನೆ
ಮಂದಿರದ ಪಶ್ಚಿಮ ದ್ವಾರದಿಂದ ಸಮುದ್ರ ತೀರಕ್ಕೆ ಸಾಗುವ ಮುಖ್ಯ ಮಾರ್ಗದ ಗಟಾರಗಳನ್ನು ಮುಚ್ಚಿರುವುದು ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ನಿಲ್ಲುವಂತಾಗಿದೆ.
ಕಾರಣ ಗಟಾರ ಮುಚ್ಚಿಗೆ ತೆರವುಗೊಳಿಸಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಲು ಸಿಇಒ ಗ್ರಾಪಂಗೆ ಸೂಚಿಸಿದರು.
ಗರ್ಭಗುಡಿ ಜಲಾವೃತ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಧರ್ ಎಸ್.ಆರ್. ನೇತೃತ್ವದಲ್ಲಿ ಹಿತಾಚಿ ಬಳಸಿ ಸಂಗಮ ಮತ್ತು ಸುತ್ತಲಿನ ಹೂಳು ಮತ್ತು ತ್ಯಾಜ್ಯಗಳನ್ನು ಹೊರಕ್ಕೆ ಸಾಗಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಜಿಪಂ ಸಿಇಒ ಅವರ ಜತೆಗೆ ಕುಮಟಾ ಉಪ ವಿಭಾಗೀಯಾಧಿಕಾರಿ ಶ್ರವಣಕುಮಾರ, ರಾಜ್ಯ ಒಳಚರಂಡಿ ನಿಗಮದ ಕಾರ್ಯ ನಿರ್ವಾಹಕ ಇಂಜಿನಿಯರ್ ಶಿವರಾಮ ನಾಯ್ಕ, ಸಹಾಯಕ ಇಂಜಿನಿಯರ್ ಅಜಯ ಪ್ರಭು, ಜಿಪಂ ಅಧಿಕಾರಿ ಸೂರ್ಯನಾರಾಯಣ ಭಟ್ಟ ಮತ್ತಿತರ ಅಧಿಕಾರಿಗಳಿದ್ದರು.