ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ (Bhajana)
ಶಿರಸಿ: ಬೇಡ್ತಿ , ಅಘನಾಶಿನಿ ಮತ್ತು ಶಾಲ್ಮಲಾ ನದಿಗಳ ತಿರುವು ಯೋಜನೆಗಳನ್ನು ಕೈಬಿಡಬೇಕು ಎಂಬ ಉದ್ದೇಶದಿಂದ ಭಕ್ತರಲ್ಲಿ ಜಾಗೃತಿ ಮೂಡಿಸಲು 9 ದಿನಗಳ ಕಾಲ ಪಟ್ಟಣ, ಗ್ರಾಮ, ಸೀಮಾ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಭಜನಾ Bhajana ಕಾರ್ಯಕ್ರಮಗಳನ್ನು ನಡೆಸುವಂತೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಸೂಚನೆ ನೀಡಿದೆ.
ಶ್ರೀ ಮಠದ ಪರಮಪೂಜ್ಯ ಗುರುಗಳಾದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯಲಿದೆ.
ಇತ್ತೀಚೆಗೆ ಬೇಡ್ತಿ (ಗಂಗಾವಳಿ) ಮತ್ತು ಅಘನಾಶಿನಿ ನದಿಗಳಲ್ಲಿ ನಡೆಸಿದ ಪೂಜೆ ಹಾಗೂ ಗಂಗಾರತಿ ಕಾರ್ಯಕ್ರಮಗಳು ಚಳವಳಿಗೆ ಬಲ ನೀಡಿದ್ದು, ನದಿ ಪೂಜೆಯೇ ನದಿ ಉಳಿಸಿ ಸತ್ಯಾಗ್ರಹ ಎಂದು ಪೂಜ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದರ ಭಾಗವಾಗಿ ಯುಗಾದಿಯಿಂದ ರಾಮನವಮಿವರೆಗೆ ಪ್ರತಿದಿನ ಎರಡು ಗಂಟೆಗಳ ಕಾಲ ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸಿ, ನದಿ ತಿರುವು ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಬಿಡಬೇಕು ಎಂಬ ಸಂದೇಶವನ್ನು ಭಕ್ತರಲ್ಲಿ ಹಂಚುವಂತೆ ಸೂಚಿಸಲಾಗಿದೆ.
ಭಜನೆ ಆರಂಭದಲ್ಲಿ ಇದರ ಕುರಿತು ಮಾಹಿತಿ ನೀಡುವುದರ ಜತೆಗೆ, ಕಾರ್ಯಕ್ರಮದ ಅಂತ್ಯದಲ್ಲಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಎರಡು ನಿಮಿಷ ಧ್ಯಾನ ಮಾಡಲಾಗುವುದು. ಬಳಿಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಹೆಸರು ಹಾಗೂ ಸಹಿ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಲ್ಲದೆ, ನದಿ ಉಳಿಸುವ ಹೋರಾಟಕ್ಕೆ ಬೆಂಬಲವಾಗಿ ಪತ್ರ ಚಳವಳಿಗೂ ಚಾಲನೆ ನೀಡಲಾಗಿದ್ದು, ಭಕ್ತರು ತಮ್ಮ ಸಹಿ ಸಹಿತ ಪತ್ರಗಳನ್ನು ನೀಡುವಂತೆ ಕೋರಲಾಗಿದೆ.
ಸಮಿತಿ ಸಂಚಾಲಕರು, ಸೀಮೆಗಳ ಪ್ರಮುಖರು, ಮಾತೃಮಂಡಳಿ ಹಾಗೂ ವಿವಿಧ ಉಪಸಮಿತಿಗಳು ಭಜನಾ ಕಾರ್ಯಕ್ರಮ ಯಶಸ್ವಿಯಾಗಲು ಸಂಯೋಜಿತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಪರೀಕ್ಷೆ ಮುಗಿಸಿರುವ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಕೂಡ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಗ್ರಾಮ ಹಾಗೂ ಬೀದಿ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮಗಳ ವರದಿಯನ್ನು ಸಂಗ್ರಹಿಸಿ ಶ್ರೀಮಠಕ್ಕೆ ಸಲ್ಲಿಸುವ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ತಿಳಿಸಿದೆ.