ಗೋಕರ್ಣ ಬಳಿಯ ಮಾದನಗೇರಿಯ ಶ್ರೀ ಮಹಾಲಸಾ ಸಿದ್ಧಿವಿನಾಯಕ ಮಂದಿರದ ಜಪಕೇಂದ್ರಕ್ಕೆ ಶುಕ್ರವಾರ ಬೆಳಗ್ಗೆ ಆಗಮಿಸಿದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥಯಾತ್ರೆಯನ್ನು ಅಪಾರ ಭಕ್ತರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.
ಗೋಕರ್ಣ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ಸಂಸ್ಥಾಪನಾ ಮಹೋತ್ಸವ ನಿಮಿತ್ತ ಶುಕ್ರವಾರ ಬೆಳಗ್ಗೆ ಮಾದನಗೇರಿಯಲ್ಲಿನ ಶ್ರೀ ಮಹಾಲಸಾ ಸಿದ್ಧಿವಿನಾಯಕ ಮಂದಿರಕ್ಕೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥಯಾತ್ರೆ(Rathayatre)ಯನ್ನು ಮಂದಿರ ಸಮಿತಿ ಅಧ್ಯಕ್ಷ ಸುನೀಲ ಪೈ ನೇತೃತ್ವದಲ್ಲಿ ಅಪಾರ ಶಿಷ್ಯ ಭಕ್ತರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.
ಮುಖ್ಯ ರಸ್ತೆಯ ಪ್ರವೇಶ ದ್ವಾರದಿಂದ ವಿವಿಧ ಮಂಗಳವಾದ್ಯ ಮತ್ತು ಯಕ್ಷವೇಷದ ಆಕರ್ಷಕ ಮೆರವಣಿಗೆಯಲ್ಲಿ ಶ್ರೀರಾಮ ರಥವನ್ನು ಮಂದಿರಕ್ಕೆ ಕರೆದೊಯ್ಯಲಾಯಿತು.
ಸ್ಥಳೀಯ ಶಾಸಕ ದಿನಕರ ಶೆಟ್ಟಿ ಮಹಾರಥದಲ್ಲಿ ಸೀತಾಮಾತೆ, ಲಕ್ಷ್ಮಣ, ಆಂಜನೇಯ ಸಹಿತ ವಿರಾಜಮಾನನಾದ ರಾಮದೇವರ ದರ್ಶನ ಪಡೆದರು.
ಶ್ರೀ ಮಂದಿರಕ್ಕೆ ರಥಯಾತ್ರೆ ಆಗಮನ ನಿಮಿತ್ತ ಶ್ರೀ ದೇವರಿಗೆ ಮಹಾಮಂಗಳಾರತಿ, ಪ್ರಾರ್ಥನೆ ಸಮರ್ಪಿತವಾಯಿತು.
ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಭಕ್ತರು ಶ್ರೀರಾಮ ದೇವರ ದರ್ಶನ ಪಡೆದು ಕೃತಾರ್ಥರಾದರು.