ಶಿರಸಿಯಲ್ಲಿ ಕಿವಿ ಕೇಳಿಸದವರಿಗಾಗಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಸ್ಪರ್ಧಿಗಳು ಪಾಲ್ಗೊಂಡರು. 
ಉತ್ತರ ಕನ್ನಡ

ಶಿರಸಿಯಲ್ಲಿ ಕಿವುಡರ ವಿಶೇಷ ಕ್ರೀಡಾಕೂಟ

ಶಿರಸಿ: ದೈಹಿಕ ಸಮಸ್ಯೆಗಳು ವ್ಯಕ್ತಿಯನ್ನು ಹತಾಶಗೊಳಿಸಿ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದಂತೆ ಮಾಡುವುದು ಸಾಮಾನ್ಯ. ಆದರೆ, ನಗರದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಕ್ರೀಡಾಕೂಟದಲ್ಲಿ ಸ್ಪರ್ಧಾಳುಗಳ ಆಸಕ್ತಿ ನೂರ್ಮಡಿಸಿತ್ತು. ತಾವೂ ಯಾರಿಗಿಂತ ಕಡಿಮೆ ಇಲ್ಲ ಎಂದು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕಿವಿ ಕೇಳಿಸದವರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ 400ಕ್ಕೂ ಅಧಿಕ ಸ್ಪರ್ಧಿಗಳು ಆಸಕ್ತಿಯಿಂದ ಪಾಲ್ಗೊಂಡರು. ರಾಜ್ಯದ ಸುಮಾರು 17 ಜಿಲ್ಲೆಗಳಿಂದ ಭಾಗವಹಿಸಿರುವ ಕ್ರೀಡಾಪಟುಗಳು ಓಟ, ಜಿಗಿತ, ಬ್ಯಾಡ್ಮಿಂಟನ್, ವಾಲಿಬಾಲ್, ಟೇಬಲ್ ಟೆನ್ನಿಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ತೋರಿದರು.
ಉತ್ತರಕನ್ನಡ ಜಿಲ್ಲೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಎಂ. ಹೆಗಡೆ ಗಡಿಕೈ ಹಾಗೂ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಕ್ರೀಡಾಕೂಟ ಉದ್ಘಾಟಿಸಿದರು.
ಕ್ರೀಡಾ ದ್ವಜಾರೋಹಣ ನೆರವೇರಿಸಲಾಯಿತು. ಕ್ರೀಡಾ ಜ್ಯೋತಿ ಸ್ವಾಗತಿಸಲಾಯಿತು. ವಿಶೇಷಚೇತನರಿಂದ ಪಥಸಂಚಲನ ನಡೆಯಿತು.
ಈ ವೇಳೆ ಮಾತನಾಡಿದ ನಾರಾಯಣ ಹೆಗಡೆ ಗಡಿಕೈ, ಜಿಲ್ಲೆಯಲ್ಲಿ 1981ರಲ್ಲಿ ಆರಂಭವಾದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಅಂಗ ನ್ಯೂನತೆ ಇರುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ ಎಂದರು. ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ದೇವರು ದೈಹಿಕವಾಗಿ ಯಾವುದೇ ನ್ಯೂನತೆ ಕೊಡದ ವ್ಯಕ್ತಿಗಳಿಗಿಂತ ನ್ಯೂನತೆ ಇದ್ದವರೇ ಹೆಚ್ಚು ಕ್ರಿಯಾಶೀಲತೆ ನೀಡಿದ್ದಾನೆ ಎಂದರು.
ನವದೆಹಲಿಯ ಅಖಿಲ ಭಾರತ ಕಿವುಡರ ಕ್ರೀಡಾಕೂಟ ಪರಿಷತ್ ಅಧ್ಯಕ್ಷ ವಿ.ಕುಮಾರ, ಕರ್ನಾಟಕ ಕಿವುಡರ ಕ್ರೀಡಾಕೂಟ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ನವೀನ ಕುಮಾರ, ಉಪಾಧ್ಯಕ್ಷ ಕಡಪ್ಪಾ ಗುಡದಿನಿ, ಹಿರಿಯ ಕ್ರೀಡಾಪಟು ಪ್ರಭಾಕರ ಜೋಗಳೇಕರ್, ಗೀತಾ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಕಿರಣಕುಮಾರ ನಾಯ್ಕ ಇದ್ದರು.