ಮುಂಡಗೋಡದಲ್ಲಿನ ವಿವಿಧ ಇಲಾಖೆಯ ಕಚೇರಿಗಳಿಗೆ ಜಿಪಂ ಸಿಇಒ ಡಾ.ದಿಲೀಶ್ ಶಶಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಇಒ ಟಿ.ವೈ. ದಾಸನಕೊಪ್ಪ, ಸೋಮಶೇಖರ ಛಬ್ಬಿ, ರಾಜೇಶ್ವರಿ ಕದಂ ಇತರರಿದ್ದರು. 
ಉತ್ತರ ಕನ್ನಡ

ಮುಂಡಗೋಡ ತಾಲೂಕಲ್ಲಿ ನೀರಿನ ಸಮಸ್ಯೆ ಪರಿಹರಿಸಿ

ಮುಂಡಗೋಡ: ಜಿಪಂ ಸಿಇಒ ಡಾ.ದಿಲೀಶ್ ಶಶಿ ಅವರು ಗುರುವಾರ ತಾಲೂಕಿನ ವಿವಿಧ ಇಲಾಖೆಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಭೇಟಿ ನೀಡಿದ ಅವರು, ಅಲ್ಲಿನ ಕಡತಗಳು ಹಾಗೂ ಹಾಜರಾತಿ ಬುಕ್ ಅನ್ನು ಪರಿಶೀಲಿಸಿದರು. ಅಧಿಕಾರಿಯಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಕುರಿತು ಅಗತ್ಯ ಮಾಹಿತಿ ಪಡೆದರು.
ತಾಲೂಕಿನ ಮೈನಳ್ಳಿ ಗ್ರಾಮವು ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವೆಂದರೆ ಅತ್ತಿವೇರಿ ಜಲಾಶಯದಿಂದ ಹುನಗುಂದ, ನಂದಿಕಟ್ಟಿ ಗುಂಜಾವತಿ ಮೂಲಕ ಮೈನಳ್ಳಿವರೆಗೆ ಪೈಪ್‌ಲೈನ್ ಸಂಪರ್ಕ ನೀಡಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಎಇ ರಾಜೇಶ್ವರಿ ಕದಂ ಅವರು ಸಿಎಸ್ ಅವರ ಗಮನಕ್ಕೆ ತಂದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಮುಂಡಗೋಡದ ಮಾಹಿತಿಯುಳ್ಳ ನಕಾಶೆ ಪ್ರತಿ ಇಲಾಖೆಯಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು. ನಂತರ ಪಂಚಾಯತ್‌ರಾಜ್ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮೈನಳ್ಳಿ ಮತ್ತು ಸಾಲಗಾಂವ ಗ್ರಾಪಂನಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಯೋಜನೆ ಮಾಡಿಕೊಂಡು ಕ್ರಿಯಾಯೋಜನೆ ರಚಿಸಿ ತಮಗೆ ವರದಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತಾಪಂ ಇಒ ಟಿ.ವೈ. ದಾಸನಕೊಪ್ಪ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಸೋಮಶೇಖರ ಛಬ್ಬಿ, ರಾಜೇಶ್ವರಿ ಕದಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.