ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

36 ಲಕ್ಷ ರೂ.ಗೂ ಅಧಿಕ ಹಣ ದುರುಪಯೋಗ

ಕಾರವಾರ: ಸರ್ಕಾರ ನಿಯಮಾವಳಿಗಳನ್ನು ಮೀರಿ ಅನುದಾನ ಬಳಕೆ, ಅಕ್ರಮ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದಿಂದ ಮಂಜೂರಾಗುವ 15 ನೇ ಹಣಕಾಸು ನಿಧಿಯಲ್ಲಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ 10 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಲೆಕ್ಕ ಪರಿಶೋಧನೆಯಲ್ಲಿ ಆಕ್ಷೇಪಣೆ ಸಲ್ಲಿಕೆಯಾಗಿದೆ. ಅದರಲ್ಲಿ 36 ಲಕ್ಷ ರೂ.ಗೂ ಅಧಿಕ ಹಣ ದುರುಪಯೋಗ ನಡೆದ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿ ದಾಖಲೆ ಮಾಡಿದೆ.

ಸರ್ಕಾರ ನೀಡುವ ಅನುದಾನ ಸದ್ಬಳಕೆಯಾಗಿದೆಯೇ?, ಪಾರದರ್ಶಕವಾಗಿ ಕಾಮಗಾರಿ ನಡೆದಿದೆಯೇ? ಎಂಬುದನ್ನು ಅರಿಯಲು ನಡೆಸಲು. ಯೋಜನೆ ಜಾರಿಯಲ್ಲಿ ಜನರ ಸಹಭಾಗಿತ್ವವನ್ನು ಖಚಿತಪಡಿಸಲು ಪ್ರತಿ ವರ್ಷ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಯುತ್ತದೆ.ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಯಡಿ ಬಿಡುಗಡೆಯಾದ ಒಟ್ಟು ಅನುದಾನದಲ್ಲಿ ಶೇ.40 ರಿಂದ 60 ರಷ್ಟು ಹಣವನ್ನು ನಿಯಮ ಮೀರಿ ಪಾವತಿಸಲಾಗಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನೆಯ ನಿರ್ದೇಶನಾಲಯದ ವರದಿ ಹೇಳುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆ ಪ್ರಮಾಣದಲ್ಲಿ ಅಕ್ರಮ ಇಲ್ಲದೇ ಇದ್ದರೂ ಶೇ. 7.8 ರಿಂದ ಶೇ. 9.63 ರವರೆಗೆ ಸರ್ಕಾರದ ನಿಯಮಗಳನ್ನು ನಿಯಮ ಮೀರಿ ಹಣ ಖರ್ಚು ಮಾಡಿರುವುದು ಕಂಡು ಬಂದಿದೆ. ದುರುಪಯೋಗವಾದ ಹಣವನ್ನು ಅಧಿಕಾರಿಗಳಿಂದ ಮರುಭರಣ ಮಾಡಿಕೊಳ್ಳಲಾಗಿದೆ.

ಎಷ್ಟು ಅಕ್ರಮ ..?

ಜಿಲ್ಲೆಯಲ್ಲಿ 2022, 2023 ಹಾಗೂ 2024 ನೇ ಸಾಲಿನಲ್ಲಿ 15 ನೇ ಹಣಕಾಸು ಯೋಜನೆಯಲ್ಲಿ ಒಟ್ಟು 136.88 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಮೂರು ವರ್ಷಗಳಲ್ಲಿ 10.98 ಕೋಟಿ ರೂ. ಕಾಮಗಾರಿಗಳಿಗೆ ಎಂದರೆ ಶೇ. 8.02 ಕಾಮಗಾರಿಗಳಿಗೆ ಲೆಕ್ಕ ಪರಿಶೋಧನೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಅದರಲ್ಲಿ 36.62 ಲಕ್ಷ ರೂ. ದುರುಪಯೋಗವಾಗಿದೆ ಎಂದು ವರದಿ ಹೇಳಿದೆ. ವರ್ಷದಿಂದ ವರ್ಷಕ್ಕೆ ಅಕ್ರಮ ಹೆಚ್ಚಿರುವುದು ಕಂಡು ಬರುತ್ತದೆ. ಇನ್ನು ಲೆಕ್ಕ ಪರಿಶೋಧಕರ ಕಣ್ಣಿಗೆ ಕಾಣದ್ದೆಷ್ಟೋ..?

ಯಾವ ವರ್ಷ ಎಷ್ಟು.....?(ಲಕ್ಷ ರೂ.ಗಳಲ್ಲಿ)

ಆರ್ಥಿಕ ವರ್ಷ ಒಟ್ಟು ಖರ್ಚಾದ ಮೊತ್ತ ಹಣ ದುರುಪಯೋಗ ಆಕ್ಷೇಪಣೆ

2022 4,460 8.78 307.23

2023 3,998 17.38 261.20

2024 5,230 18.84 486.32

ಏನಿದು 15 ನೇ ಹಣಕಾಸು ನಿಧಿ..?

2020 ರಿಂದ 15 ನೇ ಹಣಕಾಸು ಯೋಜನೆ ಜಾರಿಗೆ ಬಂದಿದೆ. 15 ನೇ ಹಣಕಾಸು ಯೋಜನೆಯಲ್ಲಿ ಶೇ.60 ರಷ್ಟು ನಿರ್ಬಂಧಿತ ಅನುದಾನವಿದ್ದು, ಅದನ್ನು ಕುಡಿಯುವ ನೀರು, ಜಲ ಮರುಪೂರಣ, ಘನತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯಕ್ಕೆ ಮಾತ್ರ ಬಳಸಬಹುದು. ಉಳಿದ ಶೇ.40 ರಷ್ಟು ಅನಿರ್ಬಂಽತ ಅನುದಾನವಾಗಿದ್ದು, ಅದರಲ್ಲಿ ರಸ್ತೆ, ಚರಂಡಿ, ಉದ್ಯಾನ, ಸಮುದಾಯ ಭವನ, ಆರೋಗ್ಯ, ಶಿಕ್ಷಣ ಮುಂತಾದವಕ್ಕೆ ಬಳಸಬಹುದು. ಒಟ್ಟಾರೆ ಗ್ರಾಮೀಣಾಭಿವೃದ್ಧಿಗೆ ಬಳಕೆಯಾಗುವ 15 ನೇ ಹಣಕಾಸಿನ ಅನುದಾನದಲ್ಲಿ ಶೇ.85 ಗ್ರಾಮ ಪಂಚಾಯಿತಿಗೆ ಶೇ.10 ತಾಲೂಕು ಪಂಚಾಯಿತಿ ಹಾಗೂ ಶೇ.5 ರಷ್ಟು ಜಿಲ್ಲಾ ಪಂಚಾಯಿತಿಗೆ ಹಂಚಿಕೆಯಾಗುತ್ತದೆ.

ಅನುಪಾಲನೆಗೆ ಸಮಿತಿ

ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ದಾಖಲಾಗುವ ಸಾಮಾನ್ಯ ಆಕ್ಷೇಪಣೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ಕೊಡಬೆಕು. ಆದರೆ, ಹಣಕಾಸಿನ ದುರುಪಯೋಗ ಎಂದು ಕಂಡುಬಂದಲ್ಲಿ ಅದನ್ನು ಪರಿಶೀಲಿಸಲು ತಾಪಂ ಇಒ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಮಾಡಲು ಸೂಚನೆ ಇದೆ. ಆ ಸಮಿತಿಯು ಸಂಬಂಧಪಟ್ಟ ಅಧಿಕಾರಿಯಿಂದ ಮೊತ್ತ ಆಕರಿಸುವ ಜವಾಬ್ದಾರಿಯನ್ನೂ ಹೊಂದಿದೆ. ಜಿಪಂನಿಂದ ಅದನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದ ಸಾ ಹಬೀಬ್ ತಿಳಿಸಿದ್ದಾರೆ.

ಯಾವ ರೀತಿ ದುರುಪಯೋಗ ..?

  • ಕಾಮಗಾರಿ ನಿರ್ವಹಿಸದೇ ಹಣ ಪಾವತಿ

  • ಕಾಮಗಾರಿ ಬಿಟ್ಟು ಇತರೆ ವೆಚ್ಚಗಳ ಸಾಮಗ್ರಿ ಖರೀದಿ

  • ವೈಯಕ್ತಿಕ ಫಲಾನುಭವಿಗೆ ಸಾಮಗ್ರಿ ವಿತರಿಸದೇ ಸರ್ಕಾರಕ್ಕೆ ಖರ್ಚು

  • ಭೌತಿಕ ಅಳತೆಗಿಂತ ಹೆಚ್ಚುವರಿ ಪಾವತಿ

  • ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿ

  • ಇತರೆ ಹಣಕಾಸಿದ ದುರುಪಯೋಗ ಪ್ರಕರಣಗಳು

  • ಅನುಮೋದಿತ ಮೊತ್ತಕ್ಕಿಂತ ಹೆಚ್ಚುವರಿ ಪಾವತಿ

  • ತೆರಿಗೆ ಕಡಿತ ಮಾಡದೇ ಗುತ್ತಿಗೆದಾರರಿಗೆ ಹಣ ಪಾವತಿ

  • ಅಧಿಕೃತ ಬಿಲ್ ಇಲ್ಲದೇ ವೆಚ್ಚ

............

ನಿಯಮ ಮೀರಿದ್ದಕ್ಕೆ ಆಕ್ಷೇಪಣೆಗಳು

  • ಗ್ರಾಮ ಸಭೆಯ ಅನುಮೋದನೆ ಪಡೆಯದೇ ವೆಚ್ಚ

  • ಕಾಮಗಾರಿಯ ಮೂರು ಹಂತದ ಫೋಟೋ ಅಳವಡಿಕೆ ಇಲ್ಲದೇ ಕಾಮಗಾರಿ

  • ಕಳಪೆ ಸಾಮಗ್ರಿ ಬಳಕೆ, ಕಾಮಗಾರಿ ಮಾಡಿರುವುದು

  • ಕಾಮಗಾರಿ ಸ್ಥಳ ಬದಲಾವಣೆ

  • ಅಳತೆ ಪುಸ್ತಕ ದಾಖಲಿಸದೇ ಹಣ ಪಾವತಿ

  • ಲೆಕ್ಕ ಪರಿಶೋಧನೆಗೆ ಕಡತ ಹಾಜರು ಮಾಡದೇ ಇರುವುದು

......