ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಅವ್ಯವಸ್ಥೆಯ ಕುರಿತು ಕೆಲ ದಿನಗಳಲ್ಲಿ ಲೋಕಾಯುಕ್ತದಿಂದ ವಿಶೇಷ ತಂಡ ಕಳಿಸಿ, ಪರಿಶೀಲನೆಗೆ ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ಗುರುವಾರ ಕ್ರಿಮ್ಸ್ಗೆ ಭೇಟಿ ನೀಡಿ ರೋಗಿಗಳ ಜೊತೆ ಮಾತುಕತೆ ನಡೆಸಿದರು. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಹಾಗೂ ಸ್ಥಳೀಯ ಮಾಜಿ ಕೌನ್ಸಿಲರ್ ರೋಶನಿ ನೀಡಿರುವ ದೂರುಗಳನ್ನು ಆಧರಿಸಿ, ಅಽಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಕ್ರಿಮ್ಸ್ನಲ್ಲಿ ವೈದ್ಯರ ಕೊರತೆ ಇದೆ. ಇನ್ನೊಂದೆಡೆ ಸ್ಕ್ಯಾನಿಂಗ್ ಸೇರಿ ಇನ್ನೂ ಕೆಲವು ಯಂತ್ರಗಳು ಬಂದು ವರ್ಷವಾದರೂ ಅದನ್ನು ಬಳಸುತ್ತಿಲ್ಲ. ಕೆಲ ಯಂತ್ರಗಳನ್ನು ಬಳಸಲು ತಂತ್ರಜ್ಞರಿಲ್ಲ. ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಚೆ ನೀರು ಹೊರ ಬಂದು ರಸ್ತೆಯ ಮೇಲೆ ಹರಿಯುತ್ತಿದೆ. ಕೆಲವು ವಿಭಾಗಗಳಲ್ಲಿ ಲಾಗ್ ಬುಕ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ವೈದ್ಯಕೀಯ ಅಧೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಬೆಳಗ್ಗೆ ಟ್ಯಾಗೋರ್ ಕಡಲ ತೀರಕ್ಕೆ ತೆರಳಿ ಪರಿಶೀಲನೆ ನಡೆಸಿದರು.ನಂತರ ನಗರ ವ್ಯಾಪ್ತಿಯಲ್ಲಿರುವ ಕುಗ್ರಾಮ ಗುಡ್ಡಳ್ಳಿಗೆ ನ್ಯಾಯಮೂರ್ತಿಗಳು ತೆರಳಿ ಅಲ್ಲಿನ ಸಮಸ್ಯೆ ಆಲಿಸಿರುವುದು ವಿಶೇಷವಾಗಿತ್ತು. ಅಲ್ಲಿ ರಸ್ತೆ ಮಾಡಿಸಿಕೊಡಲು 15 ದಿನದಲ್ಲಿ ಪ್ರಸ್ತಾವನೆಯೊಂದನ್ನು ಸಿದ್ಧ ಮಾಡಿ, ಸರ್ಕಾರಕ್ಕೆ ಕಳಿಸಿ, ಆ ಪ್ರಸ್ತಾವನೆಯನ್ನು ನನಗೂ ಕಳಿಸಿ ಎಂದು ಅಽಕಾರಿಗಳಿಗೆ ಆದೇಶಿಸಿದರು. ಅಲ್ಲದೇ, ಶಾಲೆ ಹಾಗೂ ಅಂಗನವಾಡಿ ರಿಪೇರಿಗೂ ಕ್ರಮ ವಹಿಸಲು ಸೂಚಿಸಿದರು.
ಎರಡು ದಿನಗಳಲ್ಲಿ 6 ಕಡೆ ಭೇಟಿ ನೀಡಿದ್ದು, 6 ಪ್ರತ್ಯೇಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕಳಿಸಿ, ಸಮಸ್ಯೆ ಬಗೆಹರಿಸಲು ಸೂಚಿಸಲಾಗುವುದು. ನಮ್ಮ ಸ್ಥಳೀಯ ಅಽಕಾರಿಗಳನ್ನು ಕಳಿಸಿ, ಸಮಸ್ಯೆಗಳು ಪರಿಹಾರವಾಗಿದೆಯೇ ಇಲ್ಲ ವೇ ಎಂಬುದನ್ನು ಫಾಲೋ ಅಪ್ ಮಾಡಿಸಲಾಗುವುದು ಎಂದರು. ವಿಶೇಷವಾಗಿ ಕಾರವಾರ ಒಳಚರಂಡಿ ಅವ್ಯವಸ್ಥೆ, ಸಮುದ್ರಕ್ಕೆ ಕೊಳಚೆ ನೀರು ಹೋಗುವುದನ್ನೂ ಪರಿಶೀಲಿಸಿದ್ದು, ಪ್ರಕರಣದಲ್ಲಿ ಈ ವಿಷಯಗಳನ್ನೂ ಸೇರಿಸಲಿದ್ದೇನೆ ಎಂದರು.
ಬುಧವಾರ 80 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಂಡು ಪರಿಶೀಲಿಸಲಾಯಿತು. ಅದರಲ್ಲಿ 63 ಪ್ರಕರಣಗಳು ಇತ್ಯರ್ಥವಾಗಿವೆ. ನಮ್ಮ ವ್ಯಾಪ್ತಿಗೆ ಬಾರದ ಪ್ರಕರಣಗಳಲ್ಲಿ ಕೆಲವಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲು ಸೂಚಿಸಿದ್ದೇನೆ ಎಂದರು.
ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್., ಲೋಕಾಯುಕ್ತ ಎಸ್‌ಪಿ ವಿನೋದ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿಎಂ ಇದ್ದರು.
ನಿಧಾನವಾಗಿ ಲೋಕಾಯುಕ್ತದ ಬಗ್ಗೆ ಜನರಲ್ಲಿ ಅರಿವು ಬರುತ್ತಿದೆ. ನಾನು ಮೊದಲು ಎರಡು ವರ್ಷ ಕಾರ್ಯ ನಿರ್ವಹಿಸುವ ಅವಽಯಲ್ಲಿ ಇಬ್ಬರು ಉಪ ಲೋಕಾಯುಕ್ತರ ವ್ಯಾಪ್ತಿಯಲ್ಲಿ 4 ಸಾವಿರ ಪ್ರಕರಣಗಳಿದ್ದವು. ಈಗ ಅವುಗಳ ಸಂಖ್ಯೆ 40 ಸಾವಿರಕ್ಕೆ ತಲುಪಿದೆ. ಇದರಿಂದ ನಮ್ಮ ವ್ಯಾಪ್ತಿಯ ಜಿಲ್ಲೆಗಳಿಗೆ ತೆರಳಿ ನಾವು ಲೋಕ ಅದಾಲತ್ ಮಾದರಿಯಲ್ಲಿ ಜನರ ಎದುರೇ ಕುಳಿತು ಪ್ರಕರಣಗಳನ್ನು ಬಗೆಹರಿಸುತ್ತಿದ್ದೇವೆ. ರಾಜ್ಯದ ಇತರ ಕೆಲವು ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಿಂದ ದೂರುಗಳು ಬರುವುದು ಕಡಿಮೆ ಇದೆ. ಸರ್ಕಾರ ಈಗ ನಮ್ಮ ಕಾರ್ಯಕ್ರಮವನ್ನು `ಪ್ರಜಾ ಸೇವಾ ಆಂದೋಲನ' ಹೆಸರಿನಲ್ಲಿ ಕಾಪಿ ಮಾಡಿದಂತಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ರಾಜ್ಯದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಿದ ಶೂ ಕಳಪೆಯಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು. ಶೂಗಳ ವಿತರಣೆಗೆ ರಾಜ್ಯ ಮಟ್ಟದಲ್ಲಿ ಟೆಂಡರ್ ಆಗಿದ್ದು, ಅಲ್ಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಲ್ಲೆಡೆಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಮಾದರಿಯ ಗುಣಮಟ್ಟದ ಪ್ರಯೋಗಾಲಯ ವರದಿ ಬರಬೇಕಿದೆ ಎಂದರು.
...........