ಶಿರಸಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ರಜನಿರಾಜ್ ಮಾತನಾಡಿದರು.
- ಪತ್ನಿಯರ ದಬ್ಬಾಳಿಕೆ ಇನ್ನು ಸಹಿಸಿಕೊಳ್ಳುವುದು ಬೇಡ
- ರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ರಜನಿರಾಜ್ ಹೇಳಿಕೆ
- ಪುರುಷರಿಗೆ ನ್ಯಾಯ ಒದಗಿಸಲು ಬದ್ಧ
- ಕೆಲವರಿಂದ ಮಹಿಳಾಪರ ಕಾನೂನುಗಳ ದುರ್ಬಳಕೆ
ಶಿರಸಿ: ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ನ್ಯಾಯ ಒದಗಿಸುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಪುರುಷರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣಗಳೂ ಈಗ ಹೆಚ್ಚಾಗುತ್ತಿವೆ. ಇಂತಹ ಘಟನೆಗಳಲ್ಲಿ ಸಮಾಲೋಚನೆ ಮೂಲಕ ದಬ್ಬಾಳಿಕೆ ಅನುಭವಿಸುತ್ತಿರುವ ಪುರುಷರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಬದ್ಧವಾಗಿದೆ ಎಂದು ಅಧ್ಯಕ್ಷೆ ರಜನಿರಾಜ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಇಂದಿನ ಐಟಿಬಿಟಿ ಕಾಲದಲ್ಲಿ ಮಹಿಳೆಯರೂ ಪುರುಷರಷ್ಟೇ ಸಮಾನವಾಗಿ ದುಡಿಯುತ್ತಾರೆ, ಸಮಾನ ಸಂಬಳ ಪಡೆಯುತ್ತಿದ್ದಾರೆ. ಇಂತಹ ಹಲವಾರು ಕುಟುಂಬಗಳಲ್ಲಿ ಮಹಿಳೆಯರು ತಮ್ಮ ಗಂಡನ ಮೇಲೆ ಅನಗತ್ಯ ಆರೋಪ ಮಾಡುವುದು, ಕಿರುಕುಳ ನೀಡುವುದು ಸಹ ನಡೆಯುತ್ತಿದೆ. ಕುಟುಂಬ ವ್ಯವಸ್ಥೆಯ ಆಚೆ ಸಹ ಸಂಬಂಧ ಬೆಳೆಸಿದಂತಹ ಮಹಿಳೆಯರು ತಮ್ಮ ವರ್ತನೆಗೆ ಗಂಡ ಅಡ್ಡಬರಬಾರದು ಎಂಬ ಕಾರಣಕ್ಕೆ ಆತನ ಮೇಲೆ ಹಿಡಿತ ಸಾಧಿಸಲು ಮಹಿಳೆಯರ ಪರ ಇರುವ ಕಾನೂನುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಬ್ಬಾಳಿಕೆ ಅನುಭವಿಸುತ್ತಿರುವ ಅನೇಕ ಪುರುಷರು ಕುಟುಂಬದ ಮಾನ ಬೀದಿಗೆ ಬರಬಾರದು ಎಂಬ ದೃಷ್ಟಿಯಿಂದ ಮೌನವಾಗಿ ನೋವು ಅನುಭವಿಸುವಂತಾಗಿದೆ. ಮಹಿಳೆಯರ ದಬ್ಬಾಳಿಕೆಯಿಂದ ಪುರುಷರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಸಹ ವರದಿಯಾಗಿವೆ. ಹೀಗಾಗಿ, ಇಂತಹ ಪುರುಷರ ಪರವಾಗಿ ಸಂಘಟನೆ ನಿಂತುಕೊಂಡು ಅವರಿಗೆ ನ್ಯಾಯ ಒದಗಿಸಲಿದೆ ಎಂದರು.
ಮಾಜಿ ಸಚಿವ ಎಚ್. ವಿಶ್ವನಾಥ ಅವರು ಗೌರವಾಧ್ಯಕ್ಷರಾಗಿರುವ ನಮ್ಮ ಸಮಿತಿಯ ಮುಂದೆ ಇದುವರೆಗೆ ಇಂತಹ 75ಕ್ಕೂ ಅಧಿಕ ಪ್ರಕರಣಗಳು ಬಂದಿವೆ. ಕುಟುಂಬ ವ್ಯವಸ್ಥೆ ಸರಿಯಾಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ. ಈ ರೀತಿ ಪುರುಷರ ಮೇಲೆ ದಬ್ಬಾಳಿಕೆ ನಡೆದ ಪ್ರಕರಣಗಳಲ್ಲಿ ಇಬ್ಬರನ್ನೂ ಕರೆಸಿ ಮಾತುಕತೆ ಮೂಲಕ ಅವರ ಮಧ್ಯೆ ಸೌಹಾರ್ದಯುತ ವಾತಾವರಣ ನಿರ್ಮಿಸುತ್ತೇವೆ. ಸತಿ-ಪತಿಗಳನ್ನು ಬೇರ್ಪಡಿಸಿ ಪುರುಷರಿಗೆ ನ್ಯಾಯ ಒದಗಿಸುವ ಬದಲು ಪರಸ್ಪರ ತಿಳಿವಳಿಕೆ ನೀಡಲಿದ್ದೇವೆ. ಇಂತಹ ಗೊಂದಲಗಳು ಸಾಧ್ಯವಾದಷ್ಟು ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಪುರುಷರು ತಮಗಾಗುತ್ತಿರುವ ಅನ್ಯಾಯವನ್ನು ಮೌನವಾಗಿ ಸಹಿಸಿಕೊಳ್ಳಬಾರದು. ದೂರು ದಾಖಲಿಸಿದರೆ ಆ ಸ್ಥಳಕ್ಕೇ ತೆರಳಿ ನಾವು ಚರ್ಚೆ ನಡೆಸಲು ಉದ್ದೇಶಿಸಿದ್ದೇವೆ. ಸದ್ಯ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಮಾತ್ರ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ವಿಸ್ತರಿಸಲಿದ್ದೇವೆ. ಶೀಘ್ರವೇ ಹೆಲ್ಪ್‌ಲೈನ್ ನಂಬರ್ ಸಹ ಘೋಷಣೆ ಮಾಡಲಿದ್ದೇವೆ ಎಂದರು. ಸಮಿತಿ ಸದಸ್ಯರಾದ ಎಂ.ಬಿ. ಶಕುಂತಲಾ, ದೇವರಾಜ, ಪ್ರಮೀಳಾ ಜೈರಾಮ ಇತರರಿದ್ದರು.