ಮರದ ದಿಮ್ಮಿಯನ್ನುಎತ್ತಿನ ಗಾಡಿಯಲ್ಲಿ ಶಿರಸಿಗೆ ತರಲಾಯಿತು.
ಶಿರಸಿ: ನಗರದ ಮಾರಿಕಾಂಬಾ ದೇವಿ ಜಾತ್ರೆ ವಿಧಿ ವಿಧಾನಗಳು ಈಗ ಭರ್ಜರಿ ನಡೆದಿದೆ. ಮಾರಿಕಾಂಬಾ ದೇವಿ ಜಾತ್ರೆ ಗದ್ದುಗೆಗೆ ತೆರಳುವ ಸಲುವಾಗಿ ರಥ ನಿರ್ಮಾಣಕ್ಕೆ ಮರದ ದಿಮ್ಮಿಗಳು ಮಂಗಳವಾರ ಆಗಮಿಸಿದ್ದು, ಮಾರಿಕಾಂಬಾ ದೇವಾಲಯದ ಎದುರು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ತಾಲೂಕಿನ ಬಿಕ್ನಳ್ಳಿಯ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಬೆಳೆಯಲಾಗಿದ್ದ ಈ ಮರಕ್ಕೆ ಮಾರಿಕಾಂಬಾ ದೇವಾಲಯದಿಂದ ಪೂಜೆ ಸಲ್ಲಿಸಿ ಕಚ್ಚು ಹಾಕಲಾಗಿತ್ತು. ಆ ಬಳಿಕ ಸ್ಥಳೀಯರು ಮತ್ತು ಬಾಬುದಾರ ಕುಟುಂಬದವರು ಈ ಮರವನ್ನು ಕತ್ತರಿಸಿ ಏಳು ಚಕ್ಕಡಿಗಾಡಿಗಳಲ್ಲಿ ತುಂಬಿ ರಥ ನಿರ್ಮಾಣಕ್ಕಾಗಿ ದೇವಾಲಯಕ್ಕೆ ತಂದಿದ್ದಾರೆ. ಸೋಮವಾರ ಬೆಳಗ್ಗೆಯಿಂದ ರಥದಲ್ಲಿ ಸಾಗಿಸಿ ಇಲ್ಲಿಯ ಕೋಟೆಕೆರೆ ಬಳಿ ಇಡಲಾಗಿತ್ತು. ಮಂಗಳವಾರ ಬೆಳಗ್ಗೆ ಈ ದಿಮ್ಮಿಗಳನ್ನು ದೇವಾಲಯದ ಪ್ರವೇಶ ದ್ವಾರಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ದೇವಾಲಯದ ಪುರೋಹಿತರು ಮರಕ್ಕೆ ಮತ್ತು ಮರವನ್ನು ಹೊತ್ತ ಚಕ್ಕಡಿಗೆ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಆಡಳಿತ ಮಂಡಳಿಯವರು ಬಾಬುದಾರರಿಗೆ ರಥ ಕಟ್ಟಲು ವಿಳ್ಯ ನೀಡಿದರು. ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ರವಿ ನಾಯ್ಕ, ಉಪಾದ್ಯಕ್ಷ ಸುದೇಶ ಜೋಗಳೆಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಎಸ್. ಪಿ. ಶೆಟ್ಟಿ, ವತ್ಸಲಾ ಹೆಗಡೆ, ಬಾಬುದಾರ ಪ್ರಮುಖರಾದ ಜಗದೀಶ ಗೌಡ,ರಮೇಶ ದಬ್ಬೆ,ಬಸವರಾಜ ಚಕ್ರಸಾಲಿ,ಗಿರೀಶ ಗುಡಿಗಾರ,ಮಂಜು ಜಡೆ,ಸತೀಶ ಸಾಲೆರ್,ಬಾಬು ದೇವಾಡಿಗ,ಪ್ರದೀಪ ಪವಾರ್,ಮದನ ಆರ್ಯೆರ್,ಜಗದೀಶ ಕುರಬರ್,ಗಣೇಶ ನಾಯ್ಕ,ಶೇಖರ ಸಿರ್ಸಿಕರ್ ಇತರರಿದ್ದರು.