ಶಿರಸಿಯಲ್ಲಿ ಅರೆಬರೆ ನಿರ್ಮಿಸಲಾದ ಜಿಲ್ಲಾ ಮಟ್ಟದ ಗುರು ಭವನ.
- ಜಾಗ ಮಂಜೂರಿಯಲ್ಲಿ ವಿಳಂಬ
- ಕಾರ್ಯಕ್ರಮಗಳಿಗೆ ತಾತ್ಕಾಲಿಕ ಸ್ಥಳ ಅವಲಂಬನೆ ಅನಿವಾರ್ಯ
ಶಿರಸಿ: ಶಿಕ್ಷಕರ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ನಗರದ ಯಲ್ಲಾಪುರ ರಸ್ತೆ ಬಳಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಮಟ್ಟದ ಗುರು ಭವನ ಕಟ್ಟಡ ಕಾಮಗಾರಿ ಕಳೆದ 10 ವರ್ಷಗಳಿಂದ ಅರೆಬರೆಯಾಗಿಯೇ ಉಳಿದಿದೆ. ಕಟ್ಟಡ ನಿರ್ಮಿಸುತ್ತಿರುವ ಜಾಗ ಮಂಜೂರಿಯಲ್ಲಿ ವಿಳಂಬವಾದ ಕಾರಣ ಶಿಕ್ಷಕರ ಕನಸುಗಳು ಇನ್ನೂ ಕನಸಾಗಿಯೇ ಉಳಿದುಕೊಂಡಿದೆ.
ಗುರು ಸಾಕ್ಷಾತ್ ಪರ ಭ್ರಹ್ಮ ಎಂಬ ಮಾತಿದೆ. ಶಿಕ್ಷಕರು ಚಟುವಟಿಕೆಯಿಂದ ಇದ್ದರೆ ಅದರ ಲಾಭ ಮಕ್ಕಳಿಗೆ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ 2014ರಲ್ಲಿ ನಗರದಲ್ಲಿ ಜಿಲ್ಲಾ ಮಟ್ಟದ ಗುರು ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಯಲ್ಲಾಪುರ ರಸ್ತೆಯ ಈಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪಕ್ಕದಲ್ಲಿ 5 ಗುಂಟೆ ಜಾಗ ಗುರುತಿಸಿ ಮಂಜೂರಿಗೆ ಕಳುಹಿಸಲಾಗಿದೆ.
ಜಾಗ ಗುರುತಿಸಿ, ಭೂಮಿ ಪೂಜೆ ನೆರವೇರಿಸಿ, ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಚುರುಕಿನಿಂದ ನಡೆದ ಕಾಮಗಾರಿ ನೆಲಮಹಡಿ ನಿರ್ಮಾಣದ ಬಳಿಕ ಸ್ಥಗಿತಗೊಂಡಿದ್ದು, ಹಲವು ವರ್ಷಗಳಿಂದ ಯಾವುದೇ ಪ್ರಗತಿ ಕಾಣಿಸಿಲ್ಲ.
ಇದರ ಪರಿಣಾಮವಾಗಿ, ಗುರುಭವನಕ್ಕಾಗಿ ಹಲವು ದಶಕಗಳಿಂದ ಕಾಯುತ್ತಿದ್ದ ಅನೇಕ ಶಿಕ್ಷಕರು ನಿವೃತ್ತಿಯಾಗಿದ್ದಾರೆ. ಗುರುಭವನ ಪೂರ್ಣಗೊಂಡಿದ್ದರೆ ಶಿಕ್ಷಕರ ಸಭೆಗಳು, ತರಬೇತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಂಘಟನಾ ಕಾರ್ಯಕ್ರಮಗಳಿಗೆ ಸಮರ್ಪಕ ವೇದಿಕೆ ಸಿಗುತ್ತಿತ್ತು. ಪ್ರಸ್ತುತ ಇಂತಹ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಸ್ಥಳಗಳ ಅವಲಂಬನೆ ಅನಿವಾರ್ಯವಾಗಿದೆ.
ಗುರುಭವನ ಕಟ್ಟಡ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಯಿಂದ ಜಾಗ ಜಿಪಿಎಸ್ ಮಾಡಲಾಗಿದ್ದು, ಗುರುಭವನ ಸಮಿತಿ ರಚನೆಯಾಗಿದೆ. ಶಿಕ್ಷಕರಿಂದ ಸಂಗ್ರಹಿಸಿದ 39 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿದೆ.
ಜಾಗ ಗುರುಭವನ ಹೆಸರಿಗೆ ವರ್ಗಾವಣೆಗೊಂಡ ಬಳಿಕ ಶಿಕ್ಷಕರ ಕಲ್ಯಾಣ ನಿಧಿಯಿಂದ ಅನುದಾನ ದೊರೆಯುವ ನಿರೀಕ್ಷೆಯಿದೆ. ಸಭಾಧ್ಯಕ್ಷರಾಗಿದ್ದ ವೇಳೆ ವಿಶ್ವೇಶ್ವರ ಹೆಗಡೆ ಕಾಗೇರಿ ಅನುದಾನ ಒದಗಿಸುವುದಾಗಿ ಹೇಳಿ ಕಾಮಗಾರಿಗೆ ಚಾಲನೆ ನೀಡಿದ್ದರು. ಬಳಿಕ ಕಾಮಗಾರಿ ಸ್ಥಗಿತಗೊಂಡಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದ ವೇಳೆ ಜಿಲ್ಲಾ ಗುರುಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ಯಾವ ಇಲಾಖೆ ಅಡಿ, ಎಷ್ಟು ಅನುದಾನ ಮಂಜೂರಾಗಿದೆ ಎಂಬ ಸ್ಪಷ್ಟ ಮಾಹಿತಿ ಗುರುಭವನ ಸಮಿತಿಯ ಬಳಿ ಇಲ್ಲ.
ಸುಮಾರು 12 ವರ್ಷಗಳ ಹಿಂದೆ ಗುರುಭವನ ನಿರ್ಮಾಣದ ವಿಷಯ ಪ್ರಸ್ತಾಪಗೊಂಡಾಗ ಶಿಕ್ಷಕರಿಂದ 1 ಸಾವಿರ ರೂ. ಸಂಗ್ರಹಿಸಲಾಗಿತ್ತು.
ಕಾಮಗಾರಿ ಏಕೆ ಸ್ಥಗಿತಗೊಂಡಿದೆ ಎಂಬುದರ ಕುರಿತೂ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಶಿಕ್ಷಕರ ಸಂಘ ತಿಳಿಸಿದೆ.
ಜಾಗವನ್ನು ಸಮಿತಿ ಹೆಸರಿಗೆ ವರ್ಗಾವಣೆಗೊಳ್ಳಲು ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಲಾಗಿತ್ತು. ಆದರೂ ಎರಡು ಕಾರಣ ನೀಡಿ ಅರ್ಜಿ ತಿರಸ್ಕೃತವಾಗಿದೆ.
ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡು ಗುತ್ತಿಗೆ ನೀಡಲಾಗಿತ್ತು. ಆದರೆ, ಆರಂಭಿಕ ಕೆಲಸದ ಬಳಿಕ ಗುರುಭವನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಅವಕಾಶ ನೀಡಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.
"
ಗುರುಭವನ ಕಟ್ಟಡ ನಿರ್ಮಾಣಕ್ಕೆ ಶಿಕ್ಷಕರಿಂದ ಪಡೆದ 39 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿದೆ. ಗುರುಭವನ ಶಿಕ್ಷಕರ ಬಳಕೆಗೆ ಲಭಿಸಿದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಅನುಕೂಲವಾಗಲಿದೆ. ಕಟ್ಟಡ ಕಾಮಗಾರಿಯನ್ನು ಮರುಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಡ ತರಲು ಪ್ರಯತ್ನಿಸಲಾಗುತ್ತದೆ. ಬಾಲಚಂದ್ರ ಪಟಗಾರಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ
"
ಗುರುಭವನ ಕಟ್ಟಡ ಕಾಮಗಾರಿ ಯಾವ ಕಾರಣದಿಂದ ಸ್ಥಗಿತಗೊಂಡಿದೆ ಎಂಬ ಮಾಹಿತಿ ಇಲ್ಲ. ವಿವರ ಪಡೆದು ಮಾಹಿತಿ ನೀಡಲಾಗುತ್ತದೆ. ಡಿ.ಆರ್. ನಾಯ್ಕಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ