ರೇಷ್ಮಾ ಹೆಗಡೆ  
ಉತ್ತರ ಕನ್ನಡ

ಶಿರಸಿ ಹುಡುಗಿ ಬಾಂಬೆ ಐಐಟಿ ಪರೀಕ್ಷೆಯಲ್ಲಿ ದೇಶಕ್ಕೆ ಮೂರನೇ ರ‍್ಯಾಂಕ್

ಶಿರಸಿ: ಸಾಧಿಸುವ ಛಲ, ಸತತ ಪರಿಶ್ರಮ ಇದ್ದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಸಾಧನೆ ಮಾಡಲು ಸಾಧ್ಯ ಎಂದು ಈ ವಿದ್ಯಾರ್ಥಿನಿ ತೋರಿಸಿಕೊಟ್ಟಿದ್ದಾಳೆ. ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ತಟಗುಣಿಯ ವಿದ್ಯಾರ್ಥಿನಿ ರೇಷ್ಮಾ ಗಣೇಶ ಹೆಗಡೆ ಮುಂಬೈನ ಐಐಟಿ ಕಾಲೇಜ್ ನಡೆಸಿದ ಜಾಮ್ 2026 ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ  ಮೂರನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ತಾಲೂಕಿಗೆ ಹೆಮ್ಮೆ ಮೂಡಿಸಿದ್ದಾಳೆ.
ಇಲ್ಲಿಯ ಕೃಷಿಕ ಗಣೇಶ ಹೆಗಡೆ, ಚೇತನಾ ಹೆಗಡೆ ಅವರ ಪುತ್ರಿಯಾಗಿರುವ ರೇಷ್ಮಾ, ಆರಂಭಿಕ ಶಿಕ್ಷಣವನ್ನು ಜಾಗನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದಾರೆ. ಆ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಇರುವ ಕಾನಸೂರಿನ ಕಾಳಿಕಾಂಬಾ ಪ್ರೌಢ ಶಾಲೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪೂರೈಸಿದ ಬಳಿಕ ನಗರದ ಎಂ ಇ ಎಸ್ ಚೈತನ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಕ್ರಿಸ್ಟುಜಯಂತಿ ಕಾಲೇಜ್‌ನಲ್ಲಿ ಮೈಕ್ರೋಬಯಾಲಾಜಿ ಹಾಗೂ ಜನೆಟಿಕ್ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಈ ಶಿಕ್ಷಣದ ನಡುವೆಯೇ ಮುಂಬೈ ಐ ಐಟಿ ಕಾಲೇಜಿನ ಜಾಮ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
 ಈ ಕುರಿತಂತೆ ವಿಜಯವಾಣಿಯೊಂದಿಗೆ ಮಾತನಾಡಿರುವ ರೇಷ್ಮಾ, ರಿರ‍್ಚ್ ವಿಭಾಗದಲ್ಲಿ ನಾನು ಮೊದಲಿನಿಂದಲೂ ಆಸಕ್ತಿ ಹೊಂದಿದ್ದೆ. ಮೈಕ್ರೋ ಬಯಾಲಾಜಿ ಮತ್ತು ಜೆನೆಟಿಕ್ಸ್ ಅಧ್ಯಯನದ ಮುಂದಿನ ಭಾಗವಾದ ಎಂ. ಎಸ್.ಸಿ ಶಿಕ್ಷಣಕ್ಕೆ ಮುಂಬೈ ಐ ಐ ಟಿಯಲ್ಲಿ ಅವಕಾಶ ಸಿಕ್ಕರೆ ಉತ್ತಮ ಎಂದುಕೊಂಡಿದ್ದೆ. ಈ ಹಿನ್ನೆಲೆಲ್ಲಿ ಪರಿಶ್ರಮ ತೋರಿದ್ದೆ ಎಂದಿದ್ದಾಳೆ. ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಸಮಯದ ಅಭಾವವಾಗುತ್ತಿದ್ದ ಕಾರಣ ಈ ವಿಡಿಯೋಗಳನ್ನು ವೇಗವಾಗಿ ನೋಡುತ್ತಿದ್ದೆನಲ್ಲದೇ ಪ್ರಮುಖ ಸಂಗತಿಗಳನ್ನು ನೋಟ್ ಮಾಡಿಕೊಂಡು ಅವುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದೆ. ಕಾಲೇಜ್ ಸಮಯ ಬೆಳಗ್ಗೆ 9ರಿಂದ ಸಂಜೆ 4.30ರವರೆಗೂ ಇರುತ್ತಿದ್ದ ಕಾರಣ ಸಾಧ್ಯವಾದಷ್ಟು ಸಂಜೆಯ ವೇಳೆ ಹಾಗೂ ಮುಂಜಾನೆ ಬೇಗ ಎದ್ದು ಪರೀಕ್ಷಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಸಾಧ್ಯವಾದಷ್ಟು ಹಿರಿಯ ವಿದ್ಯಾರ್ಥಿಗಳ ಜೊತೆಗೂ ಚರ್ಚೆ ನಡೆಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದೆ. ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಲಭ್ಯವಾಗಿದ್ದಾಗ ನನ್ನಿಂದಾದ ದೋಷಗಳನ್ನು ಕಂಡು ಹಿಡಿದು ಪುನಃ ಅಭ್ಯಾಸ ನಡೆಸಿದ್ದರ ಫಲವಾಗಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದಿದ್ದಾಳೆ.
 ವಿದ್ಯಾರ್ಥಿನಿಯ ಈ ಸಾಧನೆಗೆ ಪಾಲಕರು, ಚೈತನ್ಯ ಪಿಯು ಕಾಲೇಜಿನ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹಾಗೂ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.