ಜಿಲ್ಲಾಧಿಕಾರಿ ಅವರು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. 
ಉತ್ತರ ಕನ್ನಡ

ಮರಣ ಹೊಂದಿದ 153 ಮತದಾರರು ಪಟ್ಟಿಯಲ್ಲಿ ಪತ್ತೆ

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು,11,58,776 ಮಂದಿಯ ಮ್ಯಾಪಿಂಗ್ ಮಾಡಿದ್ದು, ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು 7,46, 938 ಎನ್ಯುಮರೇಷನ್ ಫಾರ್ಮ್ ಗಳನ್ನು ವಿತರಿಸಲಾಗಿದ್ದು, 8331 ಫಾರ್ಮ್ ಗಳನ್ನು ಗಣಕೀಕರಣ ಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.

ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ (Duplicate) ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 187 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 27 ಶಾಶ್ವತ ವಲಸೆ ಹಾಗೂ 153 ಮರಣ ಹೊಂದಿದ ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಆರಂಭವಾಗಿರುವ ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ - Special Intensive Revision) ಎಂದರೆ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ನವೀಕರಣ ಪ್ರಕ್ರಿಯೆ. ಚುನಾವಣಾ ಆಯೋಗದ ನಿರ್ದೇಶನದಂತೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ನಿಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾರರ ಪಟ್ಟಿಯಲ್ಲಿ ಯಾವುದೇ ದೋಷಗಳಿದ್ದರೆ ಸರಿಪಡಿಸಲು ಇದು ಅತ್ಯಂತ ಸೂಕ್ತ ಅವಕಾಶವಾಗಿದೆ.
ಗಣತಿ ಕಾರ್ಯ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನಿಗದಿತ ನಮೂನೆ (ಫಾರಂ) ನೀಡಿ ನಿಮ್ಮ ಹೆಸರು, ವಯಸ್ಸು, ವಿಳಾಸ ಮತ್ತು ಕುಟುಂಬದ ವಿವರಗಳನ್ನು ಪರಿಶೀಲಿಸುತ್ತಾರೆ
ಕಡ್ಡಾಯ ದಾಖಲೆಗಳು: ಬಿಎಲ್‌ಒಗಳಿಗೆ ಆಧಾರ್‌ ಸಂಖ್ಯೆ (ಐಚ್ಛಿಕ), ಮೊಬೈಲ್ ಸಂಖ್ಯೆ ಮತ್ತು ಕುಟುಂಬದ ಹಿರಿಯ ಸದಸ್ಯರ ವಿವರಗಳನ್ನು ನೀಡುವುದು ಕಡ್ಡಾಯ.
ಮ್ಯಾಪಿಂಗ್ ಪ್ರಕ್ರಿಯೆ: ನೀವು ಹಿಂದಿನ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ ಹಳೆಯ ದಾಖಲೆಗಳನ್ನು ನೀಡಿ ಮ್ಯಾಪಿಂಗ್ ಮಾಡಬೇಕಾಗುತ್ತದೆ.