- ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ರದ್ದಾಗುವ ಸಾಧ್ಯತೆ
- ಉತ್ತರ ಕನ್ನಡದಲ್ಲಿ ಶೇ.100 ರಷ್ಟು ಎನ್ಯುಮರೇಶನ್ ಫಾರ್ಮ್ ಡಿಜಿಟಲೀಕರಣ
ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ -ಎಸ್‌ಐಆರ್ ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶೇ.100 ರಷ್ಟು ಸಾಧನೆ ಮಾಡಿದೆ. ಜಿಲ್ಲೆಯಲ್ಲಿರುವ ಎಲ್ಲ 12,30,037 ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಿದ್ದು, ಹಿಂದಿರುಗಿಸಲಾದ ಎಲ್ಲ ಫಾರ್ಮ್ಗಳನ್ನು ಗಣಕೀಕರಣ ಮಾಡಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರಲು ಅರ್ಹರಲ್ಲದ ಒಟ್ಟು 1,07,385 ಮತದಾರರನ್ನು ಮೇಲ್ನೋಟಕ್ಕೆ ಗುರುತಿಸಲಾಗಿದೆ. ಇದರಲ್ಲಿ 5002 ಮತದಾರರು ಗೈರಾಗಿದ್ದು, 45,878 ಜನ ಕ್ಷೇತ್ರದಿಂದ ಶಾಶ್ವತ ವಲಸೆ ಹೋಗಿದ್ದಾರೆ. 44,006 ಜನ ಮರಣ ಹೊಂದಿದ್ದು, 12,463 ಮತದಾರರ ಹೆಸರು ಎರಡೆರಡು ಕಡೆ ಇರುವುದು ಪತ್ತೆಯಾಗಿದೆ. ಮುಂಬರುವ ಕರಡು ಮತದಾರರ ಪಟ್ಟಿಯಲ್ಲಿ ಈ ಎಲ್ಲ ಹೆಸರುಗಳನ್ನು ಕೈಬಿಡಲಾಗುತ್ತದೆ. ಆದರೆ, ಇದುವರೆಗೂ ಎಸ್‌ಐಆರ್ ಪ್ರಕ್ರಿಯೆ ಮುಗಿದಿಲ್ಲ. ಆಗಸ್ಟ್ 8 ರವರೆಗೆ ಅಂತ್ಯವಾಗಲಿದ್ದು, ಅಲ್ಲಿಯವರೆಗೆ ಫಾರ್ಮ್ಗಳನ್ನು ಬಿಎಲ್‌ಒಗಳಿಗೆ ನೀಡಿದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು..?
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 1,87,543 ಫಾರ್ಮ್ ವಿತರಿಸಿದ್ದು, 1,67,592 ಮಂದಿಯ ಫಾರ್ಮ್ಗಳನ್ನು ಗಣಕೀರಣಗೊಳಿಸಲಾಗಿದೆ. 19,951 ಮತದಾರರನ್ನು ಅನರ್ಹ ಎಂದು ಗುರುತಿಸಲಾಗಿದೆ. ಕಾರವಾರದಲ್ಲಿ 2,23,390 ಮತದಾರರಿದ್ದು, 1,98,966 ಮಂದಿಯ ಫಾರ್ಮ್ಗಳನ್ನು ಗಣಕೀರಣಗೊಳಿಸಿದ್ದು, 24,424 ಹೆಸರನ್ನು ಅನರ್ಹರ ಪಟ್ಟಿಯಲ್ಲಿ ಸೇರಿಸಲಾಗಿದೆ. ಕುಮಟಾದದಲ್ಲಿ 1,92,055 ಫಾರ್ಮ್ಗಳನ್ನು ವಿತರಿಸಿದ್ದು, 1,77,340 ಫಾರ್ಮ್ಗಳನ್ನು ಗಣಕೀರಣಗೊಳಿಸಲಾಗಿದೆ. 14,715 ಮತದಾರರನ್ನು ಕೈಬಿಡುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಟ್ಕಳ -2,13,646 ಫಾರ್ಮ್ಗಳನ್ನು ಗಣಕೀರಣಗೊಳಿಸಿದ್ದು, 18,132 ಅನರ್ಹ ಮತದಾರರು ಎಂದು ಗುರುತಿಸಲಾಗಿದೆ. ಶಿರಸಿ- 2,05,743 ಎನ್ಯುಮರೇಷನ್ ಫಾರ್ಮ್ಗಳನ್ನು ನೀಡಿದ್ದರು. ಅದರಲ್ಲಿ 1,91,695 ಫಾರ್ಮ್ಗಳನ್ನು ಗಣಕೀರಣಗೊಳಿಸಿದ್ದು, 14,048 ಹೆಸರುಗಳನ್ನು ಅನರ್ಹ ಎಂದು ಪಟ್ಟಿ ಮಾಡಲಾಗಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,89,528 ಫಾರ್ಮ್ ವಿತರಿಸಿದ್ದು, 1,73,413 ವಾಪಸ್ ಪಡೆಯಲಾಗಿದೆ. 16,115 ಅನರ್ಹ ಎಂದು ಗುರುತಿಸಲಾಗಿದೆ.