ಕುಮಟಾ ತಾಲೂಕಿನ ಊರಕೇರಿ ರಾಮನಾಥ ಪ್ರೌಢಶಾಲೆಯ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆಗೊಳಿಸಲಾಯಿತು. ಸುರೇಶ ನಾಯ್ಕ, ಆರ್.ಎನ್.ನಾಯ್ಕ, ಗಣಪತಿ ಭಟ್, ಎಸ್.ಜಿ. ಭಟ್, ಹನುಮಂತ ಪಟಗಾರ, ಮನೋಜ ನಾಯ್ಕ, ವಿದ್ಯಾಧರ ಇತರರು ಇದ್ದರು. 
ಉತ್ತರ ಕನ್ನಡ

ರಾಮನಾಥ ಪ್ರೌಢಶಾಲೆಗೆ ‘ರಜತ’ ಸಂಭ್ರಮ

ವಿನಯ ಆಶೋಕ ನಾಯ್ಕ
ಕುಮಟಾ: ಸ್ಥಳೀಯ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸಿಕೊಳ್ಳಲು ಹಣವಿಲ್ಲದಿದ್ದರೂ ಊರವರೇ ಸಂಘಟಿತರಾಗಿ ಪರಿಶ್ರಮದಿಂದ ಕಟ್ಟಿ ಬೆಳೆಸಿದ ಊರಕೇರಿಯ ರಾಮನಾಥ ಪ್ರೌಢಶಾಲೆಗೆ ಡಿ.27 ರಂದು ರಜತ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಸುರೇಶ ಎಸ್. ನಾಯ್ಕ ತಿಳಿಸಿದರು.
ಊರಕೇರಿ ರಾಮನಾಥ ಪ್ರೌಢಶಾಲೆಯಲ್ಲಿ ಭಾನುವಾರ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
1984ರಲ್ಲಿ ನಾಮಧಾರಿ ಸಮಾಜಸೇವಾ ಸಂಘಟನೆ ಆರಂಭಿಸಿ, 1992ರಲ್ಲಿ ಶಿಕ್ಷಣಪ್ರೇಮಿಗಳಾದ ನಾರಾಯಣ ನಾಯ್ಕ ಹಾಗೂ ಮಂಜುನಾಥ ನಾಯ್ಕ ಇನ್ನಿತರರ ಒತ್ತಾಸೆಯ ಮೇರೆಗೆ ಊರಕೇರಿಯ ಪರಮೇಶ್ವರ ನಾಯ್ಕ ಮನೆ ಮಾಳಿಗೆ ಮೇಲೆ ರಾಮನಾಥ ಪ್ರೌಢಶಾಲೆ ಆರಂಭವಾಗಿತ್ತು. 1994-95 ರಲ್ಲಿ ಮೊದಲ ಎಸ್‌ಎಸ್‌ಎಲ್‌ಸಿ ಬ್ಯಾಚ್ ಹೊರಬಿದ್ದಿತ್ತು. 2009ಕ್ಕೆ ಅನುದಾನಗೊಂಡು ಈವರೆಗೆ ಉತ್ತಮವಾಗಿ ನಡೆದುಕೊಂಡು ಬಂದಿದೆ. ಹೀಗಾಗಿ ಎಲ್ಲರ ಆಶಯದಂತೆ ರಜತ ಸಂಭ್ರಮ ಆಚರಿಸುತ್ತಿದ್ದೇವೆ ಎಂದರು.
ರಜತ ಸಮಿತಿ ಅಧ್ಯಕ್ಷ ಆರ್.ಎನ್. ನಾಯ್ಕ ಮಾತನಾಡಿ, ನಮ್ಮ ಶಾಲೆ ಆರಂಭವಾಗಿ 33 ವರ್ಷವಾಗಿದೆ. ಕರೋನಾ ಸಂಕಟ ಹಾಗೂ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಯುಕ್ತ ಈಗ ರಜತ ಸಂಭ್ರಮ ಆಚರಣೆಗೆ ಸಮಯ ಕೂಡಿಬಂದಿದೆ. ರಜತ ಸಂಭ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಮುಖ್ಯಶಿಕ್ಷಕ ಎಸ್.ಜಿ.ಭಟ್ ಮಾತನಾಡಿ, ಶಾಲೆಯಲ್ಲಿ ಈವರೆಗೆ 1600ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆದಿದ್ದು, ಈ ವರ್ಷ ಒಟ್ಟು 123 ಮಕ್ಕಳಿದ್ದು 37 ಮಂದಿ ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದಾರೆ. ಶಾಲೆಯು ಗುಣಾತ್ಮಕ ಹಾಗೂ ಪರಿಮಾಣಾತ್ಮಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98ಕ್ಕೂ ಹೆಚ್ಚು ಫಲಿತಾಂಶ ಪಡೆದಿದೆ. ರಜತ ಸಂಭ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಲ್ಲಿ ಎಲ್ಲ ವರ್ಷಗಳ ಎಸ್‌ಎಸ್‌ಎಲ್‌ಸಿ ಸಾಧಕರನ್ನು ಪುರಸ್ಕರಿಸುವುದು ಹಾಗೂ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಎಲ್ಲರಿಗೆ ಗೌರವಿಸುವ ಸಂಕಲ್ಪ ಇದೆ ಎಂದರು.
ಗ್ರಾಪಂ ಸದಸ್ಯ ಮಂಜುನಾಥ ನಾಯ್ಕ, ಮಾಜಿ ಸದಸ್ಯ ಹನುಮಂತ ಪಟಗಾರ, ಗಣಪತಿ ಭಟ್, ಶಾಲೆ ಅಭಿವೃದ್ಧಿ ಸಮಿತಿಯ ಶಂಕರ ನಾಯ್ಕ, ಪೂರ್ವ ವಿದ್ಯಾರ್ಥಿ ಸಂಘದ ಮನೋಜ ನಾಯ್ಕ, ವಿದ್ಯಾಧರ ನಾಯ್ಕ, ಲಂಬೋದರ ನಾಯ್ಕ, ಶಂಕರ ನಾಯ್ಕ ಇತರರು ಇದ್ದರು.