- ಸಿಬಿಜಿ ಸ್ಥಗಿತಗೊಳಿಸಿ ಸಿಎನ್ಜಿ ಇಂಧನ ಪೂರೈಸಲು ಆಗ್ರಹ
ಶಿರಸಿ: ನಗರದ ಪೆಟ್ರೋಲ್ ಬಂಕ್ಗಳಲ್ಲಿ ಸಿಎನ್ಜಿ ಗ್ಯಾಸ್ ಬದಲು ಸಿಬಿಜಿ ಗ್ಯಾಸ್ ಹಾಕಲಾಗುತ್ತಿದೆ. ಇದರಿಂದಾಗಿ ವಾಹನದ ಇಂಜಿನ್ ಹಾಳಾಗುತ್ತಿವೆ. ಈ ಮೊದಲಿನಂತೆಯೇ ಸಿಎನ್ಜಿ ಗ್ಯಾಸ್ ಇಂಧನವನ್ನೇ ಪೂರೈಸಲು ಒಂದು ವಾರದ ಗಡುವು ನೀಡಿ, ಪಂಪ್ಗಳಿಗೆ ವಾಹನ ಸಮೇತ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಆಟೋ ಚಾಲಕ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಶಿರಸಿಯಲ್ಲಿ ಸಿಎನ್ಜಿ ಪಂಪ್ ಆರಂಭ ಆಗಿದೆ. ನಾವೂ ಸಹ ಸಿಎನ್ಜಿ ಇಂಧನ ಬಳಸಲಾರಂಭಿಸಿದ್ದೇವಲ್ಲದೇ, ನಮ್ಮ ವಾಹನಗಳ ನೋಂದಣಿ ಪತ್ರದಲ್ಲಿ ಸಿಎನ್ಜಿ ಗ್ಯಾಸ್ನಿಂದ ಚಲಿಸುವ ವಾಹನ ಎಂದು ದಾಖಲಾಗಿದೆ. ಆದರೆ, ಕೆಲ ತಿಂಗಳಿನಿಂದ ಶಿರಸಿ ಹಾಗೂ ಮುಂಡಗೋಡ ಬಂಕ್ಗಳಲ್ಲಿ ಸಿಎನ್ ಜಿ ಬದಲು ಸಿಬಿಜಿ ಗ್ಯಾಸ್ ಹಾಕಲಾಗುತ್ತಿದೆ. ಈ ಬಗ್ಗೆ ಕೇಳಿದರೆ, ಸಿಬಿಜಿಯೇ ಈಗ ಪೂರೈಕೆ ಆಗುತ್ತಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜಿಲ್ಲೆಯ ಬೇರಾವ ನಗರದಲ್ಲಿಯೂ ಇರದ ಸಿಎನ್ಜಿ ಕೊರತೆ, ಸಿಬಿಜಿ ಪೂರೈಕೆ ಮುಂಡಗೋಡ ಮತ್ತು ಶಿರಸಿಗೆ ಮಾತ್ರ ಏಕೆ ಪೂರೈಕೆ ಆಗುತ್ತಿದೆ? ಈ ಬಗ್ಗೆ ತಹಸೀಲ್ದಾರರಿಗೂ, ಬಂಕ್ ಮಾಲೀಕರಿಗೂ ಮನವಿ ಮಾಡಿದ್ದರೂ ಯಾವುದೇ ಬದಲಾವಣೆ ಆಗಿಲ್ಲ ಎಂದರು.
ತಾಲೂಕಾಧ್ಯ ರಾಜು ಗೌಳಿ ಮಾತನಾಡಿ, ಸಿಎನ್ಜಿ ಬದಲು ಸಿಬಿಜಿ ಇಂಧನ ಹಾಕುವುದರಿಂದ ಇಂಜಿನ್ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಸಿಬಿಜಿ ಹಾಕಿದರೆ ಮೈಲೇಜ್ ಕೂಡ ಕಡಿಮೆ ಲಭಿಸುತ್ತಿದೆ. ತಾಲೂಕಿನ ರಸ್ತೆಗಳು ಏರು ದಿನ್ನೆಯವಾಗಿದ್ದು, ವಾಹನದ ಪಿಕಪ್ ಕೂಡ ಕಡಿಮೆ ಆಗಿದೆ. ಈ ರೀತಿ ಇಂಧನ ಬದಲಿಸಿ ವಾಹನ ಓಡಿಸುವಾಗ ಅಪಘಾತವಾದರೆ ವಿಮೆ ಸೌಲಭ್ಯ ಸಿಗುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು.
ಈಗಾಗಲೇ ಪೆಟ್ರೋಲ್ ಬಂಕ್ಗಳ ಮಾಲೀಕರೊಂದಿಗೆ ಎರಡ್ಮೂರು ಮೀಟಿಂಗ್ ನಡೆಸಿದ್ದೇವೆ. ವಾಹನ ಸಿಎನ್ಜಿ ಇಂಧನವಾಗಿರುವುದರಿಂದ ಸಿಬಿಜಿ ಇಂಧನ ಬಳಕೆಗೆ ಅನುಮತಿ ನೀಡಿಲ್ಲ. ಆದಾಗ್ಯೂ ಒತ್ತಾಯಪೂರ್ವಕವಾಗಿ ನಮ್ಮ ವಾಹನಗಳಿಗೆ ಸಿಬಿಜಿ ಇಂಧನ ಹಾಕುತ್ತಿರುವುದರ ಹಿಂದೆ ಪ್ರಭಾರಿ ರಾಜಕಾರಣಿಗಳು ಶಾಮೀಲಿದ್ದಂತಿದೆ. ನಮಗೆ ಸಿಬಿಜಿ ಇಂಧನ ಬೇಡ. ಸಿಎನ್ಜಿ ನಮಗೆ ಪೂರೈಸಲು ಸಾಧ್ಯವಿಲ್ಲ ಎಂದಾದರೆ ನಾವು ವಾಹನ ಓಡಿಸುವುದನ್ನು ಸ್ಥಗಿತಗೊಳಿಸಲಿದ್ದೇವೆ, ಸರ್ಕಾರ ನಾವು ತುಂಬಿದ ತೆರಿಗೆ ವಾಪಸ್ ಕೊಡಲಿ. ಒಂದು ವಾರದೊಳಗೆ ಸಿಬಿಜಿ ಸ್ಥಗಿತಗೊಳಿಸಿ ಸಿಎನ್ಜಿ ಇಂಧನವನ್ನೇ ಪೂರೈಸಬೇಕು. ಇಲ್ಲದಿದ್ದರೆ ಜು. 7ರಂದು ಪೆಟ್ರೋಲ್ ಬಂಕ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೇವೆ ಎಂದರು.
ಪ್ರದಿಪ ಪವಾರ, ಚಂದ್ರಕಾಂತ, ರಾರ್ಬಟ್ ಮುಂಡಗೋಡ, ರಾಜು ಪಾಟೀಲ, ವಿನಾಯಕ ನಾಯಕ, ಅರುಣ ನಾಯಕ, ಸತೀಶ ಶೆಟ್ಟಿ ಇತರರಿದ್ದರು.