ಸಿದ್ದಾಪುರ ಕೊಲೆ ಪ್ರಕರಣ  
ಉತ್ತರ ಕನ್ನಡ

ವಸಂತ ನಾಯ್ಕ ಕೊಲೆ ಪ್ರಕರಣ ಸುಚಿತ್ರಾ ಎ1 ಆರೋಪಿ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಸಿದ್ದಾಪುರ ಅವರಗುಪ್ಪದ ವಸಂತ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರನ ಪತ್ನಿ ಸುಚಿತ್ರಾಳನ್ನು -ಎ1 ಆರೋಪಿ ಎಂದು ಎಫ್‌ಐಆರ್‌ನಲ್ಲಿ ಗುರುತಿಸಲಾಗಿದೆ. ಆಕೆಯ ತಂದೆ ಹೊಸೂರಿನ ಲೋಕನಾಥ ನಾಯ್ಕ -ಎ2, ಕಮಲಾಕರ ವೆಂಕಟರಮಣ ಹೆಗಡೆ -ಎ3, ಸಾಗರ ಆನಂದಪುರದ ಆಕಾಶ ಎಂ.ಮಲ್ಲಿಕಾರ್ಜುನ -ಎ4 ಎಂದು ಗುರುತಿಸಲಾಗಿದೆ. ಈ ಎಲ್ಲರೂ ಅವರಗುಪ್ಪದಲ್ಲಿ ಕೊಲೆ ನಡೆದ ಸ್ಥಳದಲ್ಲಿ ಕಾರಿನಲ್ಲಿ ಸಿಕ್ಕಿ ಬಿದ್ದಿದ್ದು, ಮಂಗಳವಾರವೇ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಶಿವಮೊಗ್ಗದಿಂದ ಬಂದಿದ್ದ ಬಾಡಿಗೆ ಹಂತಕರಾದ ಮೊಹಮದ್ ಮೈಫೂಜ್ ಅಬ್ದುಲ್ ರಶೀದ್-ಎ5, ಫೈಸಲ್ ಅಮೀರ್ ಜಾನ್-ಎ6, ಇರ್ಫಾನ್ ಅಮಾನುಲ್ಲಾ-ಎ7 ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಅವರನ್ನು ಶಿವಮೊಗ್ಗದಲ್ಲಿ ಮಂಗಳವಾರವೇ ಬಂಽಸಲಾಗಿತ್ತು. ಸಾಕಷ್ಟು ವಿಚಾರಣೆ ಮಾಡಿದ ಬಳಿಕ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಪಕ್ಕದ ಮನೆಯ ವ್ಯಕ್ತಿ ಕುಮಾರ ನಾಯ್ಕ ಸ್ಥಿತಿ ಗಂಭೀರವಾಗಿದೆ. ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ಗಾಯಾಳು ಸುಚಿತ್ರಾ ಪತಿ ಮಹೇಶ ನಾಯ್ಕ ಅವರೂ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ದೊಡ್ಡಮ್ಮನಿಗೆ ನ್ಯಾಯ ಸಿಗಬೇಕು
ನನಗೆ ನ್ಯಾಯ ಕೊಡಿಸಲು ಹೋಗಿ ದೊಡ್ಡಮ್ಮ (ಸಂಧ್ಯಾ ನಾಯ್ಕ) ಅವರು ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು ಎಂದು ಸುಚಿತ್ರಾಳ ಹಿರಿಯ ಪುತ್ರಿ ಸುಮಶ್ರೀ ನಾಯ್ಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರಗುಪ್ಪದ ದೊಡ್ಡಪ್ಪ ವಸಂತ ನಾಯ್ಕ ಅವರ ಮನೆಯಲ್ಲಿದ್ದಾಗ . ರಾತ್ರಿ ನನ್ನನ್ನು ನಾಲ್ವರು ಅಪರಿಚಿತ ಹುಡುಗರು ಬಂದು ನನ್ನನ್ನು ಎಳೆದಾಡಿದರು. ಅಪ್ಪ, ದೊಡ್ಡಪ್ಪ ನನ್ನನ್ನು ಕಳಿಸುವುದಿಲ್ಲ ಎಂದು ಎದುರು ನಿಂತರು, ದೊಡ್ಡಮ್ಮ ಸಂಧ್ಯಾ ನಾಯ್ಕ ನನ್ನು ಕೋಣೆಯಲ್ಲಿ ಕೂಡಿ ಹಾಕಿದರು ಎಂದು ಘಟನೆಯನ್ನು ಸುಮಶ್ರೀ ಬಿಚ್ಚಿಟ್ಟಿದ್ದಾಳೆ. ಸುಮಶ್ರೀ ತಾಯಿಯನ್ನು ಬಿಟ್ಟು ತಂದೆಯ ಜೊತೆ ಬಂದಿದ್ದೇ ಗಲಾಟೆ ಶುರುವಾಗಲು ಕಾರಣವಾಗಿತ್ತು.