ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಕಂಚಿನ ಮೂರ್ತಿ ನಿರ್ಮಾಣ ಕಾಮಗಾರಿಗೆ ಶ್ರೀಮಂಜುನಾಥ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯ ಸ್ವಾಮೀಜಿ, ರಾಜಾರಾಮ ಪಾಟೀಲ್ ಚಾಲನೆ ನೀಡಿದರು. 
ಉತ್ತರ ಕನ್ನಡ

ಸಂಸ್ಕೃತಿ ಉಳಿವಿಗೆ ಶಿವಾಜಿ ಮಹರಾಜರು ಕಾರಣ

ಹಳಿಯಾಳ: ಭಾರತ ದೇಶಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದ್ದು, ಅವರು ಕೇವಲ ಒಂದೇ ಒಂದು ಸಮುದಾಯದ ಪ್ರಗತಿಗೆ ಕಾರಣವಾಗದೇ ಎಲ್ಲ ಸಮುದಾಯಗಳ ಏಳಿಗೆಯನ್ನು ಬಯಸಿದ ಅಜರಾಮರ ಮತ್ತು ವಿಶ್ವನಾಯಕರಾಗಿದ್ದಾರೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಹಿಂದವಿ ಸ್ವರಾಜ್ಯ ಸಂಸ್ಥಾಪಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಕಂಚಿನ ಮೂರ್ತಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂದಿನ ಸಮಯದಲ್ಲಿ ಮಹಾರಾಜರು ಜನ್ಮ ತಾಳದೆ ಇದ್ದಿದ್ದರೇ ಇಂದು ಭಾರತದಲ್ಲಿ ಯಾವುದೇ ಮಠ ಮಂದಿರಗಳು ನೋಡಲು ಸಿಗುವುದು ದುರ್ಲಬವಾಗುತ್ತಿತ್ತು ಮತ್ತು ಸನಾತನ ಭವ್ಯ ಸಂಸ್ಕೃತಿಯೂ ಕಾಣದಾಗಿರುತ್ತಿತ್ತು. ಇದಷ್ಟೇ ಅಲ್ಲದೇ ಮಹಿಳೆಯರ ಬಗ್ಗೆ ಅವರಿಗಿದ್ದ ಅಪಾರ ಗೌರವ ಜಗತ್ತಿಗೆ ಮಾದರಿಯಾಗಿದ್ದು, ಅವರ ಅಪಾರ ತೇಜಸ್ವಿ ಸಮಾಜಮುಖಿ ಗುಣಗಳಿಂದಾಗಿ ವಿಶ್ವದ ಅನೇಕ ದೇಶಗಳಲ್ಲಿ ಅವರ ಪ್ರತಿಮೆ ನಿರ್ಮಿಸಲಾಗಿದೆ. ಅವರ ಪ್ರತಿಮೆಗಳನ್ನು ಸ್ಥಾಪಿಸುವುದು ಮಾತ್ರವಲ್ಲದೇ ಅವರ ಮಾರ್ಗದರ್ಶನದಲ್ಲಿ ನಡೆದು ಜೀವನದಲ್ಲಿ ಸಮಾಜಕ್ಕಾಗಿ ಒಳ್ಳೆಯದನ್ನು ಮಾಡಬೇಕೆಂದು ಕರೆ ನೀಡಿದರು.
ಕೆಕೆ ಹಳ್ಳಿ ಶ್ರೀಗುರು ನಿತ್ಯಾನಂದ ಆಶ್ರಮದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಮೂರ್ತಿ ಪ್ರತಿಷ್ಠಾಪನೆಗೆ 2 ಗುಂಟೆ ಭೂಮಿ ದಾನ ಮಾಡಿದ ರಾಜಾರಾಮ ಶಂಭಾಜಿ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರಮುಖರಾದ ಡಾ.ಎಂ.ಜಿ. ಹಿರೇಮಠ ಮತ್ತಿತರರಿದ್ದರು.