ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ಮಂದಿರಕ್ಕೆ ಭೇಟಿಯಿತ್ತ ನಾಡಿನ ಖ್ಯಾತ ವಿದ್ವಾಂಸರಾದ ಶತಾವಧಾನಿ ( Shatavadhani ) ಡಾ. ಉಡುಪಿ ರಾಮನಾಥ ಆಚಾರ್ಯ ಅವರು ಪೂಜಾ ಸಂಕಲ್ಪ ನೆರವೇರಿಸುತ್ತಿರುವುದು.
- ಅಖಂಡ ಭಾರತ ಪರಿಕ್ರಮಣ ಪಾದಯಾತ್ರೆ
- ವಿವಿಧ ಪುರಾಣೋಕ್ತ ಮಂದಿರಗಳಲ್ಲಿ ಪೂಜೆ ಸಲ್ಲಿಕೆ
ಗೋಕರ್ಣ: ನಾಡಿನ ಶ್ರೇಷ್ಠ ವೇದ ವಿದ್ವಾಂಸರಲ್ಲಿ ಪ್ರಮುಖರಾದ ಶತಾವಧಾನಿ ( Shatavadhani )ಡಾ. ಉಡುಪಿ ರಾಮನಾಥ ಆಚಾರ್ಯ ಅವರು ಬರಿಗಾಲಿನಲ್ಲಿ ಅಖಂಡ ಭಾರತ ಪರಿಕ್ರಮಣ ಪಾದಯಾತ್ರೆ ಕೈಗೊಳ್ಳುತ್ತಿದ್ದು ಬುಧವಾರ ಇಲ್ಲಿಗೆ ಆಗಮಿಸಿ ವಿವಿಧ ಪುರಾಣೋಕ್ತ ಮಂದಿರಗಳಿಗೆ ಭೇಟಿಯಿತ್ತು ಪೂಜೆ ಸಲ್ಲಿಸಿದರು.
ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತಿರ್ಥ ಶ್ರೀಪಾದರು ಮತ್ತು ವಿದ್ಯಾವಾಚಸ್ಪತಿ ಕೀತಿರ್ಗೆ ಭಾಜನರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಾದ ವಿದ್ವಾನ್ ರಾಮನಾಥ ಆಚಾರ್ಯ ಅವರು ಅಧಿಕ ಜ್ಯೇಷ್ಠ ಮಾಸದ ಬಿದಿಗೆ ಕಳೆದ ಮೇ 18ರಂದು ಉಡುಪಿ ಕ್ಷೇತ್ರದಿಂದ ತಮ್ಮ ಕುಟುಂಬ ಮತ್ತು ಶಿಷ್ಯವರ್ಗ ಸಹಿತ ಪಾದಯಾತ್ರೆ ಪ್ರಾರಂಭಿಸಿ ಗೋಕರ್ಣ ಕ್ಷೇತ್ರಕ್ಕೆ ಬಂದು ಶ್ರೀಸಾಲಿಗ್ರಾಮ ಸಹಿತ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ವೇದೋಕ್ತ ಪೂಜಾಭಿಷೇಕ ಸಮಪಿರ್ಸಿದರು.
ಶ್ರೀ ಮಹಾಬಲೇಶ್ವರ ದೇಗುಲ ಸಮಿತಿಯ ಸದಸ್ಯ ವೇ. ಸುಬ್ರಹ್ಮಣ್ಯ ಅಡಿ, ವೇ. ಸುಬ್ರಹ್ಮಣ್ಯ ಚಿತ್ರಿಗೆಮಠ ಮತ್ತು ಕ್ಷೇತ್ರದ ಉಪಾಧಿವಂತ ವೈದಿಕರು ಸಂಕಲ್ಪ ನೆರವೇರಿಸಿ ಪೂಜೆ ನಿರ್ವಹಿಸಿದರು. ಕ್ಷೇತ್ರದಲ್ಲಿನ ಮಹಾಗಣಪತಿ, ಪಾರ್ವತಿ, ಲಕ್ಷಿವೆಂಕಟರಮಣ, ಶ್ರೀಕೃಷ್ಣಾಪುರ, ಶ್ರೀನರಸಿಂಹ ಇತ್ಯಾದಿ ಮಂದಿರಗಳನ್ನು ಅವರು ಸಂದಶಿರ್ಸಿದರು.
ಇಲ್ಲಿನ ಶ್ರೀಲಕ್ಷಿ ವೆಂಕಟರಮಣ ಮಂದಿರದ ಅರ್ಚಕ ವೇ. ನಿಶಾಂತ ಜಠಾರ ವಿವಿಧ ವ್ಯವಸ್ಥೆ ನೋಡಿಕೊಂಡರು. ಜ್ಞಾನಭಾಸ್ಕರ ಎಂದೇ ಗೌರವಿಸಲ್ಪಡುವ ಡಾ.ರಾಮನಾಥ ಆಚಾರ್ಯ ಅವರ ಸಮಗ್ರ ಭಾರತ ಪಾದಯಾತ್ರೆ ವೇದಾಂತ ಮತ್ತು ವೆರಾಗ್ಯ ಜ್ಞಾನ ಉಪದೇಶಗಳು ಪ್ರವಚನಕ್ಕೆ ಮಾತ್ರ ಸೀಮಿತವಾಗದೆ ಇಂದಿನ ಆಧುನಿಕ ಯುಗದಲ್ಲಿಯೂ ಅವುಗಳನ್ನು ಅನುಷ್ಠಾನಕ್ಕೆ ತರಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ ಎನ್ನಲಾಗಿದೆ. ಪಾದಯಾತ್ರೆಯಲ್ಲಿ ಶ್ರೀಪುತ್ತಿಗೆ ಶ್ರೀಪಾದರ ಮಹತ್ವದ ಯೋಜನೆಯಾದ ಕೋಟಿ ಗೀತಾ ಲೇಖನಯ ಪ್ರಸಾರ ಮತ್ತು ನಿರಂತರ ಪಾಠ ಪ್ರವಚನವನ್ನು ನಿರ್ವಹಿಸುವ ಅವರು ಗೋಕರ್ಣದಿಂದ ಕಾರವಾರದತ್ತ ಪಾದಯಾತ್ರೆ ಮುಂದುವರಿಸಿದರು. ಯಾವುದೇ ವಿಶೇಷ ಸೌಕರ್ಯ, ಪ್ರಚಾರ ಇಲ್ಲದೆ ತುಂಡು ಕೌಪೀನದಲ್ಲಿ ಬರಿಗಾಲಿನಲ್ಲಿ ಪರಿವಾರ ಸಮೇತ ಯಾತ್ರೆ ಹೊರಟಿರುವ ಆಚಾರ್ಯರು ಭೂಮಿಯಿಂದ ನೇರವಾಗಿ ಲಭಿಸುವ ನೀರನ್ನು ಮಾತ್ರ ಅನುಷ್ಠಾನ ಮತ್ತು ಆಹಾರಕ್ಕೆ ಬಳಸಿ ಸಪರಿವಾರದವರು ಸಿದ್ಧ ಪಡಿಸಿದ ಆಹಾರವನ್ನಷ್ಟೆ ಸೇವಿಸುವುದು ಪಾದಯಾತ್ರೆಯ ವಿಶೇಷ ದಾಖಲೆಯಾಗಿದೆ.