ಸ್ಥಳೀಯರು ಚಿತ್ತಾಕುಲಾ ಠಾಣೆಯ ಎದುರು ಸೇರಿ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.  
ಉತ್ತರ ಕನ್ನಡ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ-ಕ್ರಮ ವಹಿಸಲು ಮನವಿ

ಕಾರವಾರ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಅನ್ಯ ಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ತಾಲೂಕಿನ ಮಾಜಾಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.

ಇಕ್ಬಾಲ್ ಎಂಬಾತ ನಡೆಸುತ್ತಿದ್ದ ಹೇರ್ ಕಟ್ಟಿಂಗ್ ಸಲೂನ್‌ಗೆ ಬಂದಿದ್ದ 10 ವರ್ಷದ ಬಾಲಕಿಗೆ ಕಟ್ಟಿಂಗ್ ಸಲೂನ್‌ನಲ್ಲಿದ್ದ ಉತ್ತರ ಪ್ರದೇಶ ಮೂಲದ ಯುವಕ ಸಂಶಾದ್ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಚಿತ್ತಾಕುಲಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ಶುಕ್ರವಾರ ದಾಖಲಾಗಿದೆ. ಯುವಕ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಚಿತ್ತಾಕುಲಾ ಪಿಎಸ್‌ಐ ಪರಶುರಾಮ ನೇತೃತ್ವದ ತಂಡ ಕಾರ್ಯ ಪ್ರವೃತ್ತವಾಗಿದೆ.

ಕೃತ್ಯದ ಬಗ್ಗೆ ತಾಲೂಕಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯುವಕನನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿ, ಬಿಜೆಪಿ, ಭಜರಂಗದಳ ಹಾಗೂ ಗ್ರಾಮಸ್ಥರು ಚಿತ್ತಾಕುಲಾ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಯುವಕ ಹಾಗೂ ಹೇರ್ ಕಟ್ಟಿಂಗ್ ಸಲೂನಲ್ಲಿರುವವದ ದಾಖಲೆ ಪರಿಶೀಲನೆ ಮಾಡಬೇಕು. ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್‌ಗಳಿವೆ, ಘಟನೆಯಿಂದ ಎಲ್ಲರೂ ಭಯಭೀತರಾಗಿದ್ದಾರೆ. ಹೆಣ್ಣು ಮಕ್ಕಳು ಹಾಗೂ ಯುವತಿಯರ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಡಿವೈಎಸ್‌ಪಿ ಬಿ.ಎಸ್.ಲೋಕಾಪುರ ಹಾಗೂ ಅಧಿಕಾರಿಗಳು ಸ್ಥಳದಲ್ಲಿದ್ದು, ತಕ್ಷಣ ಆರೋಪಿ ಬಂಧನಕ್ಕೆ ಕ್ರಮ ವಹಿಸುವುದಾಗಿ ಎಚ್ಚರಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಸೂರಜ್ ದೇಸಾಯಿ, ಪ್ರಮುಖರಾದ ಅಶೋಕ ರಾಣೆ, ವಿನಾಯಕ ಸಾವಂತ, ವೀರು ಸಿ.ಹಿರೇಮಠ, ಅಜಯ ಕೊಳಂಬಕರ್, ಚಂದ್ರಹಾಸ ಕೊಠಾರಕರ್, ಸತ್ಯವಾನ್ ತಳೇಕರ್, ರೋಹನ್ ನಾಯ್ಕ, ವಿವೇಕ ಹೊನ್ನಾವರಕರ್, ಇತರರು ಇದ್ದರು.

ಜನಪರ ವೇದಿಕೆ ಆಗ್ರಹ:

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನ ಮೇಲೆ ಕ್ರಮ ವಹಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ದಿಲೀಪ ಅರ್ಗೇಕರ್ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಬೀಟ್ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.