ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ತರಂಗಮೇಟ್ ಗ್ರಾಮಸ್ಥರು ಆಗಮಿಸಿದ್ದರು.
ಕಾರವಾರ: ಸಮುದ್ರ ಕೊರೆತದಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಅಂಕೋಲಾ ತಾಲೂಕಿನ ಹಾರವಾಡ ತರಂಗ ಮೇಟ್ ನಾಗರಿಕರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು. ಶಾಸಕ ಸತೀಶ ಸೈಲ್ ಸ್ಥಳಕ್ಕಾಗಮಿಸಿ, ಗ್ರಾಮಸ್ಥರ ಪರವಾಗಿ ನಿಂತರು.
ತರಂಗಮೇಟ್‌ನಲ್ಲಿ 2024 ರಿಂದ ಸಮುದ್ರ ಕೊರೆತ ವಿಪರೀತವಾಗಿದೆ. ಇದರಿಂದ ಸುಮಾರು 200 ತೆಂಗಿನ ಮರಗಳು 2 ಎಕರೆಯಷ್ಟು ಜಮೀನು, ಮನೆಗಳನ್ನು ಸಮುದ್ರ ಆಪೋಶನ ಪಡೆದಿದೆ. 2025 ರಲ್ಲಿ ಸಮುದ್ರ ತಲೆ ತಡೆ ಗೋಡೆ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಸುಮಾರು 180 ಮೀಟರ್‌ನಷ್ಟು ಕಲ್ಲು ಹಾಕಲಾಗಿದೆ. ಆದರೆ, ಅದರ ಹಿಂದೆ ಮಣ್ಣು ತುಂಬಿ ಭರಣ ಮಾಡಿಲ್ಲ. ಇದರಿಂದ ಹಾಕಿದ ಕಲ್ಲೂ ಕೊಚ್ಚಿಕೊಂಡು ಹೋಗುವ ಅಪಾಯವಿದೆ.
ನಾಲ್ಕೈದು ಮೀಟರ್ ಸಮೀಪದಲ್ಲಿ ರಸ್ತೆ ಇದೆ. ಈ ಬಾರಿ ಈಗಾಗಲೇ ಕೊರೆತ ಶುರುವಾಗಿದ್ದು, ರಸ್ತೆಗೆ ಅಪಾಯವಾದಲ್ಲಿ ಅದರಾಚೆ ಇರುವ 25 ಕ್ಕೂ ಅಧಿಕ ಮನೆಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸಮಸ್ಯೆ ತೋಡಿಕೊಂಡರು.
ಶಾಸಕ ಸತೀಶ ಸೈಲ್ ಮಾತನಾಡಿ, ಕಲ್ಲು ಮುಂತಾದ ಮೂಲ ವಸ್ತುಗಳನ್ನು ಒದಗಿಸಿ ತುರ್ತು ಕಾಮಗಾರಿಗಳನ್ನು ಮಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದರು.
ತಾಕು ಪೊನ್ನು ಹರಿಕಂತ್ರ, ಗಣಪತಿ ದುರ್ಗೇಕರ್, ರಮೇಶ ಜನಮಟೇಕರ್, ರವಿ ಹರಿಕಂತ್ರ, ರಾಜು ತಾಂಡೇಲ, ಸಂತೋಷ ದುರ್ಗೇಕರ್, ಶಂಕರ ಹರಿಕಂತ್ರ ಇತರರು ಇದ್ದರು.