ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ (save the Valley) ಸಭೆಯಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸದಸ್ಯರೊಂದಿಗೆ ಚರ್ಚೆ ನಡೆಸಿದರು 
ಉತ್ತರ ಕನ್ನಡ

ಕಣಿವೆ ಉಳಿಸಿ ಸಮಾವೇಶ ಜ. 11ರಂದು Save the Valley

ವಿನಯ ಹೆಗಡೆ
ಶಿರಸಿ: ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ (Save the Valley) ವಿಶೇಷ ಸಭೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಗರದ ಪೂಗಭವನದಲ್ಲಿ ಸೋಮವಾರ ನಡೆಯಿತು.
ಶ್ರೀಗಳು ಶಿರಸಿ ನಗರ ಹಾಗೂ 3 ತಾಲೂಕುಗಳ ಸಮಿತಿ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ತನು-ಮನ-ಧನ-ಜನರ ಜೊತೆ ಬೇಡ್ತಿ ಅಘನಾಶಿನಿ ಬೃಹತ್ ಜನಸಮಾವೇಶ ಯಶಸ್ವಿಗೊಳಿಸಲು ಕರೆ ನೀಡಿದರು.
ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗಡೆ, ಜನಪ್ರತಿನಿಧಿಗಳು, ಗಣ್ಯರು ತಜ್ಞರ ಪಾಲ್ಗೊಳ್ಳುವಿಕೆಯ ಸಮಾವೇಶದ ವ್ಯಾಪಕ ವ್ಯವಸ್ಥೆಗೆ ಶಿರಸಿ ನಗರದ ಗಣ್ಯರ ಸಂಚಲನಾ ಸಮಿತಿ ರಚಿಸಲಾಯಿತು.
ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, ಜನವರಿ 11 ರಂದು ನಗರದಲ್ಲಿ ಮೊಳಗುವ ಸಮಾವೇಶದ ಧ್ವನಿ ದೆಹಲಿಗೂ ಕೇಳಿಸುವಂತೆ ಆಗಬೇಕು ಎಂದರು.
ವಿವಿಧ ಜಾತಿ ಸಮುದಾಯಗಳ ಪ್ರಮುಖರ ಸಭೆಯನ್ನು ಡಿ. 27 ರಂದು ಏರ್ಪಡಿಸಲು ನಿರ್ಧರಿಸಲಾಯಿತು.
ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿ.ಎಂ.ಎಸ್ ಅಧ್ಯಕ್ಷ ಜಿಟಿ ಹೆಗಡೆ, ಎಂಈಎಸ್ ಅಧ್ಯಕ್ಷ ಜಿ.ಎಂ. ಮುಳಖಂಡ ಸಹಕಾರ ಸಂಸ್ಥೆಗಳ ಬೆಂಬಲ ಪ್ರಕಟಿಸಿದರು.
ಸಿದ್ದಾಪುರ ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಡಿ.29 ರಂದು ಸಿದ್ಧಾಪುರದಲ್ಲಿ ಎಲ್ಲ ಸಹಕಾರಿಗಳ ಸಭೆ ನಡೆಸಲಿದ್ದೇವೆ ಎಂದರು.
ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ ಹೆಗಡೆ ಅವರು ಹೇರೂರು, ಹೆಗ್ಗರಣಿಯಲ್ಲಿ ತಯಾರಿ ಸಭೆಗಳು ನಡೆಯಲಿವೆ ಎಂದರು.
ಗ್ರಾಮೀಣ ಪ್ರದೇಶದ ಮನೆ ಮನೆಗೆ ಕರಪತ್ರ ವಿತರಣೆ ಮಾಡಲಿದ್ದೇವೆ ಎಂದು ಗೋಪಾಲ ಕೃಷ್ಣ ತಂಗಾರಮನೆ ತಿಳಿಸಿದರು. ರತ್ನಾಕರ ಬಾಡಲಕೊಪ್ಪ ವಿವಿಧ ಧಾರ್ಮಿಕ ಮುಖಂಡರ ಭೇಟಿ ಮಾಡಿ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.
ಕುಮಟಾದಲ್ಲಿ ಜ. 1 ರಂದು ಅಘನಾಶಿನಿ ಜಾಗೃತಿ ಸಭೆ ನಡೆಸುವ ವಿಷಯವನ್ನು ಬಾಲಚಂದ್ರ ಸಾಯಿಮನೆ ಪ್ರಕಟಿಸಿದರು. ಅಂಕೋಲಾ ತಾಲೂಕು ಕಲ್ಲೇಶ್ವರದಲ್ಲಿ ಸಭೆ ನಡೆಸುವ ಸಂಗತಿಯನ್ನು ನರಸಿಂಹ ಸಾತೊಡ್ಡಿ ತಿಳಿಸಿದರು. ಎಸಿ ಕಛೇರಿ, ಅರಣ್ಯ ಕಚೇರಿಗೆ ಸದ್ಯದಲ್ಲೆ ಬೇಡ್ತಿ ನಿಯೋಗ ಭೇಟಿ ನೀಡಲಿದೆ ಎಂದು ಎನ್ ಎಸ್ ಭಟ್ ಎಫ್ ಡಿ ಮಠ ತಿಳಿಸಿದರು.
ಡಾ. ಕೇಶವ ಕೊರ್ಸೆ, ಸುರೇಶ ಹಕ್ಕಿಮನೆ ತಂಡ ಸಾಮಾಜಿಕ ಮಾಧ್ಯಮದ ಮೂಲಕ ಬೇಡ್ತಿ-ಅಘನಾಶಿನಿ ಜಾಗೃತಿ ಮಾಡಲು ಜವಾಬ್ದಾರಿ ನೀಡಲಾಯಿತು. ವಿಶ್ವೇಶ್ವರ ಭಟ್, ವೆಂಕಟೇಶ ನಾಯ್ಕ, ಶ್ರೀನಿವಾಸ್ ಹೆಬ್ಬಾರ್, ವಿಶ್ವನಾಥ ಶೀಗೇಹಳ್ಳಿ, ಅನಂತ ಮೂರ್ತಿ ಹೆಗಡೆ, ಉಪೇಂದ್ರ ಪೈ, ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತೀಶ ಭಟ್, ಶ್ಯಾಮಸುಂದರ ಭಟ್, ಲೋಕೇಶ್ ಹೆಗಡೆ ಇತರರಿದ್ದರು.