ಶಿರಸಿ: ಸಹಕಾರ ಕ್ಷೇತ್ರದಲ್ಲಿ ಸಹಕಾರ ರತ್ನ ಪ್ರಶಸ್ತಿಯು ಅತ್ಯುನ್ನತ ಗೌರವವಾಗಿದ್ದು, ಹಲವು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಜಿಲ್ಲೆಯ ಇಬ್ಬರು ಹಿರಿಯ ಸಹಕಾರಿಗಳಿಗೆ ಈ ಗೌರವ ಸಂದಿರುವುದು ಹೆಮ್ಮೆಯ ಸಂಗತಿ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಬ್ಯಾಂಕ್ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಸಿಸಿ ಬ್ಯಾಂಕ್ನ ಸಹಕಾರಿ ಪ್ರಶಸ್ತಿ ಹಾಗೂ ಅಪೆಕ್ಸ್ ಬ್ಯಾಂಕ್ ವತಿಯಿಂದ ಸಹಕಾರಿ ಸಂಘಗಳಿಗೆ ನೀಡಲಾಗುವ 2024-25 ಮತ್ತು 2025-26ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಿ ಮಾತನಾಡಿದರು.
ಅವರು ನಗರದ ಕೆಡಿಸಿಸಿ ಕೆಡಿಸಿಸಿ ಬ್ಯಾಂಕ್ನಲ್ಲಿ ಸುದೀರ್ಘ 30 ವರ್ಷಗಳು ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬ್ಯಾಂಕ್ನ ಅಭಿವೃದ್ಧಿಗೆ ಶ್ರಮಿಸಿದ ಭಾಸ್ಕರ ಹೆಗಡೆ ಕಾಗೇರಿ ಮತ್ತು ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಲ್ಲಿ 39 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಸಹಕಾರಿ ಭೀಷ್ಮ ಎಂದೇ ಪ್ರಸಿದ್ಧರಾದ ಎಸ್.ಪಿ. ಶೆಟ್ಟಿ ಅವರಿಗೆ ಈ ಬಾರಿ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ನಮ್ಮ ಬ್ಯಾಂಕ್ಗೆ ಸಂದ ಗೌರವವಾಗಿದೆ. ಬ್ಯಾಂಕ್ನ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ವೈಯಕ್ತಿಕ ಭಾವನೆ, ರಾಗದ್ವೇಷಗಳಿಗೆ ಅವಕಾಶ ಇರಬಾರದು. ಕೂಲಿಕಾರರ ಕ್ಷೇತ್ರದಿಂದ ಮೊದಲ ಬಾರಿಗೆ ಕೆಡಿಸಿಸಿ ಬ್ಯಾಂಕ್ ಪ್ರವೇಶಿಸಿದ್ದೇನೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅನೇಕರು ಸಹಕಾರ ನೀಡಿರುತ್ತಾರೆ. ಅಂತಹ ಎಲ್ಲರ ಕೊಡುಗೆಯನ್ನು ಸ್ಮರಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ಕೃಷ್ಣ ದೇಸಾಯಿ, ನಿರ್ದೇಶಕರಾದ ಶ್ರೀಕಾಂತ ಘೋಟ್ನೇಕರ, ಪ್ರಕಾಶ ಗುನಗಿ, ಬೀರಣ್ಣ ನಾಯಕ, ಎಂ.ಎಚ್. ನಾಯ್ಕ, ರಾಜಗೋಪಾಲ ಅಡಿ, ವಿ.ಕೆ. ವಿಶಾಲ, ರಾಘವೇಂದ್ರ ಶಾಸ್ತ್ರಿ, ಮಾಬ್ಲೇಶ್ವರ ಹೆಗಡೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಮೋಹನ ನಾಯಕ, ರವಿ ಹೆಗಡೆ, ನಿರಂಜನ ಭಟ್ಟ, ವಿಶ್ವನಾಥ ಭಟ್ಟ, ಆರ್.ಎಂ. ಹೆಗಡೆ ಬಾಳೇಸರ, ತಿಮ್ಮಯ್ಯ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಸ್ವಾಗತಿಸಿದರು. ಸಿಬ್ಬಂದಿ ಅನಿತಾ ಹೆಗಡೆ ಹಾಗೂ ಮೇಧಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಕೆಡಿಸಿಸಿ ಬ್ಯಾಂಕ್ ವತಿಯಿಂದ 2023-24ನೇ ಸಾಲಿನಲ್ಲಿ ಉತ್ತಮ ಸಹಕಾರಿಯಾಗಿ ಹರಿಯಪ್ಪ ನಾಯ್ಕ ಹಾಗೂ ಉತ್ತಮ ಸಹಕಾರಿ ನೌಕರರಾಗಿ ಗಣಪತಿ ವಿಶ್ವೇಶ್ವರ ಭಟ್ಟ ಅವರನ್ನು ಗೌರವಿಸಲಾಯಿತು. 2024-25ನೇ ಸಾಲಿನಲ್ಲಿ ಉತ್ತಮ ಸಹಕಾರಿಯಾಗಿ ಶಾಂತಾರಾಮ ನಾಯಕ ಹಾಗೂ ಉತ್ತಮ ಸಹಕಾರಿ ನೌಕರರಾಗಿ ರಾಮಕೃಷ್ಣ ಸುಬ್ರಾಯ ಹೆಗಡೆ ಅವರಿಗೆ ದಿ. ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 2024-25ನೇ ಸಾಲಿನ ಎಸ್.ಪಿ. ಪಂಡಿತ ಬಹುಮಾನವನ್ನು ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಉಮ್ಮಚಗಿ ಹಾಗೂ 2025-26ನೇ ಸಾಲಿನ ಬಹುಮಾನವನ್ನು ನಂದಿಗದ್ದಾ ಸೇವಾ ಸಹಕಾರಿ ಸಂಘಕ್ಕೆ ನೀಡಿ ಗೌರವಿಸಲಾಯಿತು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ಹೆಗಡೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಉತ್ತಮ ಕಾರ್ಯನಿರ್ವಹಣೆ ಮಾಡಿದ ಸಹಕಾರಿ ಸಂಘಗಳಿಗೆ ಮತ್ತು ಕಾರ್ಯದರ್ಶಿಗಳು, ನೌಕರರಿಗೆ ಹಾಗೂ ಸಾಲ ವಸೂಲಾತಿ ಮಾಡಿದ ಸಹಕಾರಿ ಸಂಘಗಳ ನೌಕರರನ್ನು ಗೌರವಿಸಲಾಯಿತು.