ಕಾರವಾರ: ವಿಜಯವಾಣಿ ದಾಂಡೇಲಿ ವರದಿಗಾರ ಉಮೇಶ ಪಾಟೀಲ(72)ಅವರು ಭಾನುವಾರ ನಿಧನರಾದರು.
ಅನಾರೋಗ್ಯದಿಂದ ಅವರು ಕೆಲ ದಿನಗಳಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವಿಜಯಪುರ ಜಿಲ್ಲೆಯ ಮೂಲದ ಅವರು ದಾಂಡೇಲಿಯಲ್ಲಿ ಬಿಎನ್‌ಜೆಸಿ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ದೀರ್ಘ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ದಾಂಡೇಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. 2024 ರಲ್ಲಿ ಅವರು ದಾಂಡೇಲಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ದಾಂಡೇಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದ ಅವರು ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು.
ದಾಂಡೇಲಿ ಜಗಜ್ಯೋತಿ ಬಸವ ಸಮಿತಿ ಅಧ್ಯಕ್ಷರಾಗಿ ನಗರದಲ್ಲಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಲ್ಲಿ ಹಗಲಿರುಳು ಶ್ರಮಿಸಿದ್ದರು.`ವಿಜಯವಾಣಿ' ಪ್ರಾರಂಭದಿಂದಲೂ ವರದಿಗಾರರಾಗಿದ್ದ ಅವರು, ಹಲವು ವಿಶೇಷ ವರದಿ ಪ್ರಕಟಿಸಿ, ದಾಂಡೇಲಿ ಅಭಿವೃದ್ಧಿಗೆ ಶ್ರಮಿಸಿದ್ದರು. ವಿಆರ್‌ಎಲ್ ಟ್ರಾವೆಲ್ಸ್ ನ ದಾಂಡೇಲಿ ಏಜೆನ್ಸಿಯನ್ನು ಬಹುಕಾಲ ಯಶಸ್ವಿಯಾಗಿ ನಡೆಸಿದ್ದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಅಪಾರ ಬಂಧುಗಳು, ಶಿಷ್ಯವರ್ಗ ಹಾಗೂ ಅಭಿಮಾನಿಗಳು ಇದ್ದಾರೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ ಅವರು ನಿಧನಕ್ಕೆ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.