ಶೇಖರ್ ಬಿ. ಜಗದಾಳೆ ಕುಟುಂಬದವರಿಗೆ ಎಸ್‌ಬಿಐನಿಂದ ಪರಿಹಾರದ ಚೆಕ್‌ ವಿತರಿಸಲಾಯಿತು.  
ಉತ್ತರ ಕನ್ನಡ

ಮೃತ ಯೋಧನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ಕೈಗಾದಲ್ಲಿ ಕರ್ತವ್ಯ ನಿರ್ವಹಿಸುವಾಗ ಅಪಘಾತದಲ್ಲಿ ಮೃತಪಟ್ಟ ಸಿಐಎಸ್‌ಎಫ್‌ ಯೋಧ

ಕಾರವಾರ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ಶೇಖರ್ ಬಿ. ಜಗದಾಳೆ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ವೇತನ ಪ್ಯಾಕೇಜ್‌ನಡಿ 1 ಕೋಟಿ ರೂ. ಅಪಘಾತ ವಿಮೆ ಪರಿಹಾರ ನೀಡಲಾಯಿತು.

ಕೈಗಾದ ಎನ್‌ಪಿಸಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಖರ್ ಬಿ. ಜಗದಾಳೆ ಅವರು 2025ರ ನವೆಂಬರ್ 8ರಂದು ಮೃತಪಟ್ಟಿದ್ದರು. ಅವರು ಎಸ್‌ಬಿಐನ ಎನ್‌ಪಿಸಿ ಕೈಗಾ ಶಾಖೆಯ ಗ್ರಾಹಕರಾಗಿದ್ದು, ಸಿಐಎಸ್‌ಎಫ್ ಸಿಬ್ಬಂದಿಗಾಗಿ ರೂಪಿಸಿರುವ ಸಿಎಪಿಎಸ್‌ಪಿ ವೇತನ ಪ್ಯಾಕೇಜ್‌ನಡಿ ವಿಮಾ ಸೌಲಭ್ಯ ಹೊಂದಿದ್ದರು. ಕೈಗಾದ ಸಿಐಎಸ್‌ಎಫ್ ಘಟಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತರ ಪತ್ನಿ ಅಂಜನಿ ಶೇಖರ್ ಜಗದಾಳೆ ಹಾಗೂ ಪುತ್ರ ಅಥರ್ವ ಶೇಖರ್ ಜಗದಾಳೆ ಅವರಿಗೆ ವಿಮೆ ಪರಿಹಾರ ಹಸ್ತಾಂತರಿಸಲಾಯಿತು. ಇದೇ ವೇತನ ಪ್ಯಾಕೇಜ್‌ನಡಿ ಈ ಹಿಂದೆ 10 ಲಕ್ಷ ಮೊತ್ತದ ಟರ್ಮ್ ಲೈಫ್ ಇನ್ಶೂರೆನ್ಸ್ ಪರಿಹಾರವನ್ನೂ ಕುಟುಂಬಕ್ಕೆ ಪಾವತಿಸಲಾಗಿತ್ತು.

ಸಿಐಎಸ್‌ಎಫ್ ಪರವಾಗಿ ಹಿರಿಯ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಉಪ ಕಮಾಂಡೆಂಟ್ ಬಿರೇಂದ್ರ ಕುಮಾರ್ ಹಾಗೂ ಸಹಾಯಕ ಕಮಾಂಡೆಂಟ್ ಮನೋಜ್ ಕುಮಾರ್ ಪಾಲ್ಗೊಂಡಿದ್ದರು. ಎಸ್‌ಬಿಐ ಪರವಾಗಿ ಹುಬ್ಬಳ್ಳಿಯ ಉಪ ಪ್ರಧಾನ ವ್ಯವಸ್ಥಾಪಕ ಮೊಣಿಕಂಡನ್ ರಾಮಕೃಷ್ಣನ್, ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಮುರಳೀಧರ, ಕಾರವಾರದ ಮುಖ್ಯ ವ್ಯವಸ್ಥಾಪಕ ಗಣೇಶ್ ಎಲ್. ಭಟ್ ಹಾಗೂ ಎಸ್‌ಬಿಐ ಎನ್‌ಪಿಸಿಸಿ ಕೈಗಾ ಶಾಖೆಯ ವ್ಯವಸ್ಥಾಪಕ ಮನೀಶ್ ದುಮಾಡೆ ಉಪಸ್ಥಿತರಿದ್ದರು.