ಹಾಳಾದ ಸಿದ್ದರ ರಸ್ತೆ  
ಉತ್ತರ ಕನ್ನಡ

ರಸ್ತೆಗಳು ಹಾಳು ಜನರ ಗೋಳು

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಂತ 600 ಕಿಮೀ ರಸ್ತೆ ಹಾಳು
ಕಾರವಾರ: ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ಅತಿವೃಷ್ಟಿಯಾಗಿಲ್ಲ. ಆದರೆ, ರಾಷ್ಟ್ರೀಯ , ರಾಜ್ಯ ಹೆದ್ದಾರಿಗಳು, ಜಿಲ್ಲಾ ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಓಡಾಟಕ್ಕೆ ಹರಸಾಹಸ ಪಡಬೇಕಾಗಿದೆ.
ಜಿಲ್ಲೆಯಲ್ಲಿ ಜೂನ್ 1 ರಿಂದ ಆಗಸ್ಟ್ 30 ರವರೆಗೆ 2376 ಮಿಮೀ ವಾಡಿಕೆಯ ಮಳೆಯಾಗಬೇಕಿತ್ತು. ಆದರೆ, ಈ ವರ್ಷ 1884 ಮಿಮೀ ಮಾತ್ರ ಮಳೆಯಾಗಿದೆ. ಶೇ.21 ರಷ್ಟು ಮಳೆಯ ಕೊರತೆ ಕಾಣುತ್ತಿದೆ. ಆದರೆ, ಇಷ್ಟೇ ಮಳೆಗೆ ಸಾಕಷ್ಟು ಸಾರ್ವಜನಿಕ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಸುಮಾರು 636 .07 ಕಿಮೀ ರಸ್ತೆಗಳಲ್ಲಿ ಹೊಂಡ ಬಿದ್ದಿದೆ ಎಂದು ಅಂದಾಜಿಸಲಾಗಿದೆ.

ಯಾವ್ಯಾವ ರಸ್ತೆಗಳು ಹಾಳು:

ಮುಖ್ಯವಾಗಿ ಜಿಲ್ಲೆಯಲ್ಲಿ ಅಂಕೋಲಾ-ಯಲ್ಲಾಪುರ-ಹುಬ್ಬಳ್ಳಿ, ಶಿರಸಿ-ಹಾವೇರಿ ರಾಷ್ಟಿçÃಯ ಹೆದ್ದಾರಿಗಳು ಹಾಳಾಗಿದ್ದು, ಸಂಚಾರಕ್ಕೆ ಸಂಕಟ ಪಡಬೇಕಾಗಿದೆ. ಕಾರವಾರ-ಇಳಕಲ್, ಸದಾಶಿವಗಡ-ಔರಾದ್, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಗಳಲ್ಲಿ ವಿವಿಧೆಡೆ ಹೊಂಡ ಬಿದ್ದಿದೆ. ಸಿದ್ದಾಪುರ-ಜೋಗ, ಶಿರಸಿ-ಯಲ್ಲಾಪುರ, ಶಿರಸಿ-ಸಿದ್ದಾಪುರ, ಸಾಗರ-ಸಿದ್ದಾಪುರ ಹೀಗೆ ವಿವಿಧ ರಸ್ತೆಗಳು ಅಲ್ಲಲ್ಲಿ ಹಾಳಾಗಿವೆ. ಇವುಗಳಲ್ಲೂ ಸುಗಮ ಓಡಾಟ ದುಸ್ತರವಾಗಿದೆ. ವಾಹನ ಚಾಲಕರು ಹೊಂಡಗಳಲ್ಲಿ ಇಳಿದು ಹತ್ತಿ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತ ಸಾಗಬೇಕಾಗಿದೆ. ಇನ್ನೂ ಹಲವು ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ ಎನ್ನುವಂತಿವೆ. ರಸ್ತೆಗಳ ಅಪರಿಮಿತ ಹೊಂಡಗಳ ಕಾರಣದಿಂದ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳು ಬೇಗನೇ ಹಾಳಾಗುತ್ತಿವೆ.

ನಿರ್ವಹಣೆಯ ಕೊರತೆ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿವೆ ಎಂದು ಪಟ್ಟಿ ಮಾಡಲಾಗುತ್ತದೆ. ಅದೊಂದೇ ಕಾರಣವಲ್ಲ. ನಿರ್ವಹಣೆಯ ಕೊರತೆಯೂ ಇದಕ್ಕೆ ಕಾರಣ ಎನ್ನುತ್ತಾರೆ. ಜಿಲ್ಲೆಯ ಪ್ರಜ್ಞಾವನಂತ ನಾಗರಿಕ ರಮೇಶ ಹೆಗಡೆ. ಪಿಡಬ್ಲುಡಿ, ಪಿಆರ್‌ಇಡಿ ವ್ಯಾಪ್ತಿಗೆ ಬರುವ ರಸ್ತೆಗಳ ಪಕ್ಕ ಚರಂಡಿಗಳನ್ನು ಸಮರ್ಪಕವಾಗಿ ಮಾಡಲಾಗುತ್ತಿಲ್ಲ. ನೀರು ಸಂಪೂರ್ಣವಾಗಿ ರಸ್ತೆಯ ಮೇಲೆಯೇ ಹರಿಯುತ್ತದೆ. ಹೆದ್ದಾರಿಗಳ ಪಕ್ಕದ ಗಿಡ, ಮರಗಳನ್ನು ಕಡಿಯಲಾಗುತ್ತಿಲ್ಲ. ಇದರಿಂದ ರಸ್ತೆಯೇ ಕಾಣದ ಪರಿಸ್ಥಿತಿ ಇದೆ ಎನ್ನುತ್ತಾರೆ ಅವರು.

ಅರೆಬರೆ ದುರಸ್ತಿ

ಅನುದಾನದ ಕೊರತೆಯ ಕಾರಣ ನೀಡಿ ರಸ್ತೆ, ದುರಸ್ತಿ ಕಾಮಗಾರಿಗಳಲ್ಲೂ ಪೀಸ್ ವರ್ಕ್ ಮಾಡಲಾಗುತ್ತಿದೆ. ಒಟ್ಟು 30 ಕಿಮೀ ರಸ್ತೆ ಹಾಳಾಗಿದ್ದರೆ ಸಂಪೂರ್ಣ ರಸ್ತೆಯನ್ನು ರಿ ಕಾರ್ಪೇಟ್ ಮಾಡುವುದಿಲ್ಲ. ಆಯ್ದ ಕೆಲವು ಸ್ಥಳಗಳಲ್ಲಿ ಮಾತ್ರ ರಿ ಕಾರ್ಪೇಟ್ ಮಾಡಲಾಗುತ್ತದೆ. ಇದರಿಂದ ಒಂದು ಮಳೆಗಾಲದಲ್ಲಿ ಒಂದೆಡೆ ರಸ್ತೆ ಹಾಳಾದರೆ, ಇನ್ನೊಂದು ಮಳೆಗಾಲ ಬರುವಷ್ಟರಲ್ಲಿ ಬೇರೆಡೆ ಹಾಳಾಗಿರುತ್ತದೆ. ಇದರಿಂದ ವಾಹನ ಸವಾರರು ಸಂಪೂರ್ಣ ರಸ್ತೆಯನ್ನು ಇಡೀ ವರ್ಷ ನೆಮ್ಮದಿಯಿಂದ ಪ್ರಯಾಣಿಸುವ ಪರಿಸ್ಥಿತಿಯೇ ಇಲ್ಲವಾಗಿದೆ. ಶಿರಸಿ, ಸಿದ್ದಾಪುರ, ಶಿರಸಿ-ಯಲ್ಲಾಪುರ ಮುಂತಾದೆಡೆ ಕಳೆದ ವರ್ಷ ಅಲ್ಲಲ್ಲಿ ದುರಸ್ತಿ ಮಾಡಿದ್ದು, ಈ ಬಾರಿ ಆ ಜಾಗ ಬಿಟ್ಟು ಬೇರೆಡೆ ಹೊಂಡಗಳು ಬಿದ್ದಿವೆ ಎನ್ನುತ್ತಾರೆ ವಾಹನ ಚಾಲಕರು.

ಹಾಳಾಗಿರುವುದು

  • *142.57 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು
  • *110.70 ಕಿಮೀ ರಾಜ್ಯ ಹೆದ್ದಾರಿಗಳು
  • *382.80 ಕಿಮೀ ಗ್ರಾಮೀಣ ರಸ್ತೆಗಳು
  • *ಪಿಡಬ್ಲುಡಿ ವ್ಯಾಪ್ತಿಯ 10 ಸೇತುವೆ, ಕಲ್ವರ್ಟ್ಗಳು
  • *ಪಿಆರ್‌ಇಡಿ ವ್ಯಾಪ್ತಿಯ 47ಸೇತುವೆ, ಕಲ್ವರ್ಟ್ಗಳು
"

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮೂಲ ಸೌಕರ್ಯ ಹಾಳಾದ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದ ನಂತರ, ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ರಸ್ತೆ ದುರಸ್ತಿ ಕಾಮಗಾರಿಗೆ ಕ್ರಮ ವಹಿಸಲಾಗುವುದು. ಕೆ.ಲಕ್ಷ್ಮೀಪ್ರಿಯಾಜಿಲ್ಲಾಧಿಕಾರಿ, ಉತ್ತರ ಕನ್ನಡ