ಭಟ್ಕಳದ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಮಾನವ ಹಕ್ಕುಗಳ ದಿನಾಚರಣೆ ಏರ್ಪಡಿಸಲಾಗಿತ್ತು. ಶ್ರೀಕಾಂತ ಕುರಣೆ, ದೀಪಾ ಅರಳಗುಂಡಿ, ನಾಗೇಶ ಶೆಟ್ಟಿ ಇತರರಿದ್ದರು.
ಭಟ್ಕಳ: ಮನುಷ್ಯನ ಜೀವನವನ್ನು ಉತ್ತಮಗೊಳಿಸಲು ಹಾಗೂ ಜೀವನ ನಡೆಸಲು ಬೇಕಾದ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಮಾನವ ಹಕ್ಕುಗಳನ್ನು ನೀಡಲಾಗಿದೆ. ಸಾಮಾನ್ಯ ಮನುಷ್ಯನಿಗೆ ರಕ್ಷಣೆಯನ್ನು ಈ ಹಕ್ಕುಗಳು ನೀಡುತ್ತವೆ ಎಂದು ಜೆಎಂಎಫ್‌ಸಿ ಭಟ್ಕಳದ ಸಿವಿಲ್ ನ್ಯಾಯಾಧೀಶ ಶ್ರೀಕಾಂತ ಕುರಣೆ ಹೇಳಿದರು.
ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಭಟ್ಕಳ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ಧನ್ಯಕುಮಾರ ಜೈನ್ ಮಾತನಾಡಿ, ಮಾನವ ಹಕ್ಕುಗಳು ಜನರ ಘನತೆ ಹಾಗೂ ಗೌರವವನ್ನು ಕಾಪಾಡುತ್ತವೆ. 2ನೇ ಮಹಾಯುದ್ಧದ ಕರಾಳತೆಯ ಬಳಿಕ ಜಾಗತಿಕ ನಾಯಕರು ಮನುಷ್ಯನಿಗೆ ಸಾರ್ವತ್ರಿಕವಾಗಿ ನೀಡಬೇಕಾದ ಹಕ್ಕುಗಳ ಬಗ್ಗೆ ಚರ್ಚಿಸಿ, 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆಯಲ್ಲಿ ಘೋಷಣೆ ಮಾಡುವುದರ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಗೌರವದಿಂದ ಬದುಕುವಂತೆ ಅವಕಾಶ ಮಾಡಿಕೊಡಲಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಈಶ್ವರ ಎಂ. ನಾಯ್ಕ ಮಾತನಾಡಿದರು.
ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ದೀಪಾ ಅರಳಗುಂಡಿ, ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಪುಟ್ಟ ಲಕ್ಷ್ಮೀ, ಸಹಾಯಕ ಸರ್ಕಾರಿ ಅಭಿಯೋಜಕ ವಿವೇಕ ನಾಯ್ಕ ಉಪಸ್ಥಿತರಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್‌ಎಸ್‌ಎಸ್ ಯೋಜನಾಧಿಕಾರಿ ಧನರಾಜ್ ಎನ್. ಎ. ಪ್ರಸ್ತಾವಿಕ ನುಡಿಯನ್ನಾಡಿದರು. ಲವೀನಾ, ಪ್ರತಿಮಾ ನಾಯ್ಕ, ದಿವ್ಯಾ ನಾಯ್ಕ, ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.