ಸಿದ್ದಾಪುರ ಪಟ್ಟಣ ಪಂಚಾಯಿತಿ ಕಚೇರಿ. 
ಉತ್ತರ ಕನ್ನಡ

ಕೆಲವರಿಗೆ ಸಿಹಿ, ಹಲವರಿಗೆ ಕಹಿ ತಂದ (Reservation) ಮೀಸಲಾತಿ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಸಿದ್ದಾಪುರ ಪಪಂನಲ್ಲಿವೆ 15 ವಾರ್ಡ್
  • ಒಂಭತ್ತು ಸದಸ್ಯರಿಗೆ ವಾರ್ಡ್ ವಲಸೆ ಅನಿವಾರ್ಯ
  • ಬೇರೆ ವಾರ್ಡ್‌ನಲ್ಲಿ ನಿಲ್ಲಲು ಇಂದಿನಿಂದಲೇ ತಯಾರಿ
ಸಿದ್ದಾಪುರ: ಇಲ್ಲಿಯ ಪಪಂನ ವಾರ್ಡಗಳಿಗೆ ಕರಡು ( Reservation) ಮೀಸಲಾತಿ ಪ್ರಕಟವಾಗಿದ್ದು, ಇಂದಿನಿಂದಲೇ ಚರ್ಚೆಗಳು ಜೋರಾಗಿದೆ. ಇನ್ನು ಪ್ರಕಟಗೊಂಡಿರುವ ಕರಡು ಮೀಸಲಾತಿ ಕೆಲವರಿಗೆ ಸಿಹಿ ನೀಡಿದರೆ ಇನ್ನು ಹಲವರಿಗೆ ಕಹಿ ತಂದಿದೆ.
ಇಲ್ಲಿಯ ಪಪಂನಲ್ಲಿರುವ 15 ವಾರ್ಡ್‌ಗಳಿಗೂ ಕರಡು ಮೀಸಲಾತಿ ಪ್ರಕಟವಾಗಿದೆ. ಇದರಿಂದ ಹಾಲಿ ಇರುವ ಸದಸ್ಯರು ತಮ್ಮ ಈಗಿನ ವಾರ್ಡ್‌ನಲ್ಲಿ ತಮಗೆ ಮೀಸಲಾತಿ ಬರದೇ ಇರುವುದರಿಂದ ಬೇರೆ ವಾರ್ಡ್‌ನಲ್ಲಿ ನಿಲ್ಲಲು ಇಂದಿನಿಂದಲೇ ತಯಾರಿ ನಡೆಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹಾಲಿ ಆರು ಸದಸ್ಯರಿಗೆ ಈಗಿರುವ ವಾರ್ಡಿನಲ್ಲಿಯೇ ನಿಲ್ಲುವ ಅವಕಾಶ ಇದ್ದು, ಇನ್ನುಳಿದ ಒಂಭತ್ತು ಸದಸ್ಯರು ಬೇರೆ ವಾರ್ಡಿನತ್ತ ಸಾಗಬೇಕಾಗಿದೆ. 
ವಾರ್ಡ ನಂ. 3ರಲ್ಲಿ ಈ ಹಿಂದೆ ಸಾಮಾನ್ಯ ಇದ್ದು, ಈಗಲೂ ಸಾಮಾನ್ಯ ಬಂದಿರುವುದರಿಂದ ಹಾಲಿ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ವಾರ್ಡ್ ನಂ. 4ರಲ್ಲಿ ಈ ಹಿಂದೆ ‘ಸಾಮಾನ್ಯ’ ಇದ್ದು ಈಗ ಹಿಂದುಳಿದ ವರ್ಗ ‘ಎ‘ ಬಂದಿರುವುದರಿಂದ ಹಾಲಿ ಸದಸ್ಯ ಸುಧೀರ್ ಕೊಂಡ್ಲಿ, ವಾರ್ಡ್ ನಂ. 10ರಲ್ಲಿ ಈ ಹಿಂದೆ ಸಾಮಾನ್ಯ ಇದ್ದು ಈಗಲೂ ಸಾಮಾನ್ಯ ಬಂದಿರುವುದರಿಂದ ಹಾಲಿ ಸದಸ್ಯ ಗುರುರಾಜ ಶಾನಭಾಗ, ವಾರ್ಡ ನಂ. 11ರಲ್ಲಿ ಈ ಹಿಂದೆ ಸಾಮಾನ್ಯ ಇದ್ದು ಈಗ ಹಿಂದುಳಿದ ವರ್ಗ ‘ಎ’ ಬಂದಿರುವುದರಿಂದ ಹಾಲಿ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್, ವಾರ್ಡ್ ನಂ. 12ರಲ್ಲಿ ಈ ಹಿಂದೆ ‘ಸಾಮಾನ್ಯ ಮಹಿಳೆ’ ಇದ್ದು ಈಗಲೂ ‘ಸಾಮಾನ್ಯ ಮಹಿಳೆ’ ಬಂದಿರುವುದರಿಂದ ಮಂಜುಳಾ ಅವರಿಗೆ ಹಾಗೂ ವಾರ್ಡ್ ನಂ. 15ರಲ್ಲಿ ಈ ಹಿಂದೆ ಸಾಮಾನ್ಯ ಮಹಿಳೆ ಇದ್ದು, ಈಗಲೂ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿರುವುದರಿಂದ ಹಾಲಿ ಸದಸ್ಯೆ ರಾಧಿಕಾ ಕಾನಗೋಡ ಅವರುಗಳಿಗೆ ಮತ್ತೆ ಇದೇ ವಾರ್ಡ್‌ನಲ್ಲಿ ನಿಲ್ಲುವ ಅವಕಾಶ ದೊರಕಿದೆ.
ವಾರ್ಡ ನಂ 2ರಲ್ಲಿ ಈ ಹಿಂದೆ ಹಿಂದುಳಿದ ವರ್ಗ ‘ಎ’ ಮಹಿಳೆ ಇದ್ದು, ಈಗ ಸಾಮಾನ್ಯ ಬಂದಿರುವುದರಿಂದ ಹಾಲಿ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅವರು ಮತ್ತೆ ಉಮೇದುವಾರಿಕೆ ಮಾಡಬಹುದಾಗಿದೆ. ಇನ್ನುಳಿದ ಎಂಟು ಸದಸ್ಯರುಗಳಿಗೆ ಈ ಹಿಂದೆ ಸ್ಪರ್ದಿಸಿದ್ದ ವಾರ್ಡ್‌ನಲ್ಲಿ ಅವಕಾಶ ಇಲ್ಲದಿದ್ದರೂ ಬೇರೆ ವಾರ್ಡ್‌ನತ್ತ ತಮ್ಮ ಚಿತ್ತ ಹರಿಸಬಹುದಾಗಿದೆ. 
ಮೀಸಲಾತಿ ಕರಡು ಪಟ್ಟಿಗೆ ಕೆಲವು ಸದಸ್ಯರು ಹಾಗೂ ಮುಖಂಡರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೇಳಿಬರುತ್ತಿದೆ. ಇನ್ನು ಕೆಲವು ಆಕಾಂಕ್ಷಿಗಳು ಪ್ರಕಟಗೊಂಡ ಮೀಸಲಾತಿ ಸ್ವಾಗತಿಸಿ ತಮ್ಮ ಉಮೇದುವಾರಿಕೆಯನ್ನು ತಮ್ಮ ಮುಖಂಡರ ಗಮನಕ್ಕೆ ತರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.