ಮುಂಡಗೋಡ ನ್ಯಾಸರ್ಗಿ ಜಲಾಶಯದಿಂದ ಬಾಚಣಕಿ ಗ್ರಾಮದ ರೈತರ ಗದ್ದೆಗಳಿಗೆ ನೀರು ಬಿಡುವಂತೆ ಚಿಕ್ಕ ನೀರಾವರಿ ಇಲಾಖೆ ಎದುರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
- ಚಿಕ್ಕ ನೀರಾವರಿ ಇಲಾಖೆ ಎದುರು ಬಾಚಣಕಿ ಗ್ರಾಮದ ರೈತರ ಪ್ರತಿಭಟನೆ
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಜಲಾಶಯದಿಂದ ಬಾಚಣಕಿ ಗ್ರಾಮದ ರೈತರ ಗದ್ದೆಗಳಿಗೆ ನೀರು ಬಿಡುತ್ತಿಲ್ಲ ಎಂದು ಬಾಚಣಕಿ ರೈತರು ಚಿಕ್ಕ ನೀರಾವರಿ ಇಲಾಖೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
40 ವರ್ಷಗಳ ಹಿಂದೆ ನ್ಯಾಸರ್ಗಿ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಕಾಲುವೆ ಮೂಲಕ ಬಾಚಣಿಕಿ ಗ್ರಾಮದ ರೈತರ ಗದ್ದೆಗಳಿಗೆ ನೀರು ಹರಿದು ಬರಬೇಕಿತ್ತು. ಆದರೆ, ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಇಲ್ಲ ಸಲ್ಲದ ನೆಪ ಹೇಳುತ್ತ ನಮ್ಮ ಜಮೀನುಗಳಿಗೆ ಕಳೆದ 20 ವರ್ಷಗಳಿಂದ ನೀರು ಬಿಡುತ್ತಿಲ್ಲ. ಇದರಿಂದ ಬಾಚಣಕಿ ಭಾಗದ ಹಲವಾರು ರೈತರಿಗೆ ಭಾರಿ ಅನ್ಯಾಯವಾಗಿದೆ. ಈ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು.
ಚಿಕ್ಕ ನೀರಾವರಿ ಇಲಾಖೆ ಇಂಜಿನಿಯರ್ ಆರ್.ಎನ್. ನಾಯ್ಕ ಮಾತನಾಡಿ, ಕಾಲುವೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಭಾಗದ ಜಲಾಶಯ ಗೇಟ್ ತೆರೆದರೆ ಮರಳಿ ಮುಚ್ಚಲು ಬರುವುದಿಲ್ಲ. ಅದಕ್ಕಾಗಿ ಗೇಟ್ ದುರಸ್ತಿ ಮಾಡಿದ ನಂತರ ನೀರು ಬಿಡುತ್ತೇವೆ. ಜಲಾಶಯ ಗೇಟ್ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುದಾನ ಬಂದಿಲ್ಲ. ಅನುದಾನ ಬಂದ ನಂತರ ಜಲಾಶಯದ ಗೇಟ್ ದುರಸ್ತಿಪಡಿಸಿ ನೀರು ಬಿಡುತ್ತೇವೆ ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.