ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹದಲ್ಲಿ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ನಾರಾಯಣ ದಾಸ ಹೀಪನಳ್ಳಿ, ಕೆ.ಪಿ.ಹೆಗಡೆ, ರಾಮದಾಸ ಭಟ್ಟ ಇದ್ದರು. 
ಉತ್ತರ ಕನ್ನಡ

ರಾಮಾಯಣ, ಮಹಾಭಾರತ, ಭಗವದ್ಗೀತೆ ಓದಿ

ಸಿದ್ದಾಪುರ: ಭಗವಂತ ಇಲ್ಲದ ಜಾಗ ಇಲ್ಲ. ಆಕಾಶ ಎಲ್ಲೆಲ್ಲಿ ತುಂಬಿಕೊಂಡಿದೆಯೋ ಅಲ್ಲಿ ಭಗವಂತನಿದ್ದಾನೆ. ಕೃಷ್ಣ-ರಾಮರು ಓಡಾಡಿದ ಪುಣ್ಯ ಭೂಮಿ ಭಾರತ. ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಗಳನ್ನು ಓದಬೇಕು. ಆ ಮೂಲಕ ನಮ್ಮ ಸನಾತನ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಹಾರ್ಸಿಟಕಟ್ಟಾ ಗಣೇಶ ಮಂಟಪದಲ್ಲಿ ಗಜಾನನೋತ್ಸವ ಸಮಿತಿ ಹಾಗೂ ಗೆಳೆಯರ ಬಳಗ ಹಾರ್ಸಿಕಟ್ಟಾ ಅವರ ಸಹಯೋಗದಲ್ಲಿ ಭದ್ರಗಿರಿ ಅಚ್ಯುತ ದಾಸರ ಸ್ಮರಣಾರ್ಥ ಆಯೋಜಿಸಿರುವ ಭಾಗವತ ಸಪ್ತಾಹದ ನಾಲ್ಕನೇ ದಿನದಂದು ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಭಗವಂತನ ಸಾಧನೆ ಅಪಾರವಾದದ್ದು. ಅದನ್ನು ಪ್ರಶ್ನಿಸಬಾರದು. ಹರಿಕಥೆಯನ್ನು ಕೇಳುವಾಗ ಮನಸು ಶುದ್ಧವಾಗಿರಬೇಕು. ಭಾಗವತ ಸಪ್ತಾಹ ಎನ್ನುವುದು ಇದೊಂದು ಭಕ್ತಿರಸಾಯನ. ಭಾಗವತ ಸಪ್ತಾಹ ಭಕ್ತಿ, ಭಕ್ತ ಹಾಗೂ ಭಗವಂತ ಈ ಮೂರರ ಕುರಿತು ತಿಳಿಸಿಕೊಡುತ್ತದೆ ಎಂದು ಹೇಳಿ ಅವುಗಳನ್ನು ವಿಸ್ತಾರವಾಗಿ ವಿವರಿಸಿ ಚಿತ್ತ ಶುದ್ಧಿಗೆ ಭಗವಂತನ ಚಿಂತನೆ ಅವಶ್ಯ ಎಂದು ಹೇಳಿದರು.

ರಾಜಾರಾಮ ಹೆಗಡೆ ಬಾಳೇಜಡ್ಡಿ, ರಮೇಶ ಹೆಗಡೆ ಹಾರ್ಸಿಮನೆ, ಶ್ರೀಕಾಂತ ಶಾನಭಾಗ ಶ್ರೀಗಳಿಗೆ ಸಂಘಟಕರ ಪರವಾಗಿ ಫಲಸಮರ್ಪಣೆ ಮಾಡಿದರು.

ನಂತರ ನಾರಾಯಣ ದಾಸ ಹೀಪನಳ್ಳಿ ಇವರಿಂದ ಹರಿಕೀರ್ತನೆ ನಡೆಯಿತು.ಕೆ.ಪಿ.ಹೆಗಡೆ ಹೀಪನಳ್ಳಿ ಹಾರ್ಮೊನಿಯಂನಲ್ಲಿ ಹಾಗೂ ರಾಮದಾಸ ಭಟ್ಟ ಶಿರಸಿ ತಬಲಾದಲ್ಲಿ ಸಹಕರಿಸಿದರು. ರಮೇಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.