ಕಾರವಾರ ಗ್ರೀನ್‌ ಸ್ಟ್ರೀಟ್‌ನಲ್ಲಿ ನೀರು ತುಂಬಿಕೊಂಡಿತು.  
ಉತ್ತರ ಕನ್ನಡ

ಜುಲೈ 6 ರವರೆಗೆ ಭಾರಿ ಮಳೆಯ ಮುನ್ಸೂಚನೆ ಆರೇಂಜ್‌ ಅಲರ್ಟ್‌ ಘೋಷಣೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಜಿಲ್ಲೆಯಲ್ಲಿ ಉತ್ತಮ ಮಳೆ ಮುಂದುವರಿದಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗಿದ್ದು, ಮಲೆನಾಡು ಭಾಗದಲ್ಲಿ ಹದವಾಗಿ ಸುರಿಯುತ್ತಿದೆ. ಜೂನ್ ಅಂತ್ಯಕ್ಕೆ ಅಂತು ಜಿಲ್ಲೆಯ ನದಿಗಳು ಕೆಂಪೇರಿ ತುಂಬಿ ಹರಿಯಲಾರಂಭಿಸಿವೆ. ಜಲಪಾತಗಳಿಂದ ನೀರು ಧುಮ್ಮಿಕ್ಕಲಾರಂಭಿಸಿದೆ.
ಶನಿವಾರ ಪ್ರಾರಂಭವಾದ ಮಳೆ, ಭಾನುವಾರ, ಸೋಮವಾರವೂ ಮುಂದುವರಿಯಿತು. ಮಳೆಯಿಂದ ಜಿಲ್ಲೆಯ ವಿವಿಧೆಡೆ ಸಣ್ಣಪುಟ್ಟ ಅನಾಹುತಗಳು ಸಂಭವಿಸಿವೆ. ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಽಯಲ್ಲಿ ಜಿಲ್ಲೆಯಲ್ಲಿ ಸರಾಸರಿ 41.8 ಮಿಮೀ ಮಳೆಯಾಗಿದೆ.
ಹೊನ್ನಾವರದಲ್ಲಿ 101 ಮಿಮೀ, ಕಾರವಾರ-90.3, ಕುಮಟಾ-74.2, ಭಟ್ಕಳ-72.9, ಅಂಕೋಲಾ-59.4, ಸಿದ್ದಾಪುರ-49.4, ಶಿರಸಿ-36, ಜೊಯಿಡಾ-20.9, ಯಲ್ಲಾಪುರ-14.3, ಹಳಿಯಾಳ-11.2, ದಾಂಡೇಲಿ-9.9, ಮುಂಡಗೋಡ-8.1 ಮಿಮೀ ಮಳೆಯಾಗಿದೆ.

ಆರೇಂಜ್ ಅಲರ್ಟ್

ಜಿಲ್ಲೆಯಲ್ಲಿ ಜೂನ್ 30 ರಂದು ಹದವಾಗಿ ಮಳೆಯಾಗಲಿದೆ. ಜು.6 ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕ ನೀಡಿದೆ. ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಜನರು ಎಚ್ಚರ ವಹಿಸಬೇಕು ಎಂದು ಜಿಲ್ಲಾಡಳಿತ ಸಂದೇ ನೀಡಿದೆ.