- ಜುಲೈ ಕೊನೆಯ ವಾರ ಆಗಸ್ಟ್‌ನಲ್ಲಿ ಉತ್ತಮ ಮಳೆ
- 12 ರಲ್ಲಿ 4 ತಾಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಜಿಲ್ಲೆಯ ಕೆಲವು ತಾಲೂಕುಗಳನ್ನು ಬರದ ಪಟ್ಟಿಯಿಂದ ಹೊರಗೆ ಹಾಕಿದೆ.
ಜೂನ್ ಹಾಗೂ ಜುಲೈ ಅರ್ಧಭಾಗ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿತ್ತು. ಬಹುತೇಕ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಶೇ.30 ಕ್ಕಿಂತ ಹೆಚ್ಚು ಕೊರತೆ ಕಂಡುಬಂದಿತ್ತು. ನಂತರ ಹದವಾಗಿ ವರ್ಷಧಾರೆ ಸುರಿದಿದ್ದು, ಸದ್ಯ ಭಟ್ಕಳ, ಹಳಿಯಾಳ, ಯಲ್ಲಾಪುರ ಮುಂಡಗೋಡ ತಾಲೂಕುಗಳಲ್ಲಿ ತಾಲೂಕುಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಶೇ.25 ಕ್ಕಿಂತ ಅಽಕ ಮಳೆ ಕೊರತೆ ಇದೆ. ಒಂದೆರಡು ಕಡೆ ವಾಡಿಕೆಗಿಂತ ಸ್ವಲ್ಪ ಹೆಚ್ಚೇ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ಹೇಳುತ್ತದೆ.
ಜುಲೈ ತಿಂಗಳ ಉತ್ತರ ಕನ್ನಡ ಜಿಲ್ಲೆಯ ವಾಡಿಕೆಯ ಮಳೆ 993.4 ಮಿಮೀ ಇದೆ. ಈ ಬಾರಿ 906.1 ಮಿಮೀ ಮಳೆಯಾಗಿದೆ. ಎಂದರೆ ಶೇ. 9 ರಷ್ಟು ಕೊರತೆ ಕಾಣಿಸಿಕೊಂಡಿತು. ಆಗಸ್ಟ್ 1 ರಿಂದ 8 ರವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 232.1 ಮಿಮೀ ಇದ್ದು, 312 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ. 34 ರಷ್ಟು ಹೆಚ್ಚೇ ಮಳೆಯಾಗಿದೆ. ಜೂನ್ 1 ರಿಂದ ಆಗಸ್ಟ್ 8 ರವರೆಗೆ ಜಿಲ್ಲೆಯಲ್ಲಿ ಶೇ.16 ರಷ್ಟು ಮಳೆ ಕೊರತೆ ಕಾಣುತ್ತದೆ. ಜನವರಿ 1 ರಿಂದ ಹೋಲಿಸಿದರೆ ಶೇ.13 ರಷ್ಟು ಕೊರತೆ ಉಂಟಾಗಿದೆ.
ನಿಯಮ ಏನು ಹೇಳುತ್ತದೆ
ಎನ್‌ಡಿಆರ್‌ಎಫ್ ನಿಯಮಗಳನ್ನು ಗಮನಿಸಿ ಕರ್ನಾಟಕ ಸರ್ಕಾರ 2020 ರಲ್ಲಿ ಮೂರು ಹಂತಗಳಲ್ಲಿ ಬರ ಪೀಡಿತ ತಾಲೂಕುಗಳನ್ನು ಘೋಷಿಸಿತ್ತು. ಶೇ. 60 ಕ್ಕಿಂತ ಹೆಚ್ಚು ಮಳೆ ಕೊರತೆ ಉಂಟಾದ ತಾಲೂಕುಗಳು, ಶೇ. 30 ಕ್ಕಿಂತ ಹೆಚ್ಚು ಕೊರತೆ ಉಂಟಾದ ತಾಲೂಕುಗಳು ಹಾಗೂ ಶೇ.20 ಕ್ಕಿಂತ ಹೆಚ್ಚು ಮಳೆ ಕೊರತೆ ಉಂಟಾದ ತಾಲೂಕುಗಳು ಎಂದು ಪರಿಗಣಿಸಲಾಗಿತ್ತು. ಸತತ ಮೂರು ವಾರ ಮಳೆ ಬೀಳದೇ ಇರುವುದನ್ನೂ ಬರ ಘೋಷಣೆಗೆ ಪರಿಗಣಿಸಲಾಗಿತ್ತು. ಈ ಬಾರಿ ಸರ್ಕಾರ ಯಾವ ಮಾನದಂಡ ಬಳಸಲಿದೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಅಧಿಕಾರಿಗಳು
ಅಣೆಕಟ್ಟೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅಷ್ಟಾಗಿ ಮಳೆಯಾಗದ ಕಾರಣ ಜಿಲ್ಲೆಯ ಕೆಪಿಸಿ ಅಣೆಕಟ್ಟೆಗಳ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿಲ್ಲ. ಕಾಳಿ ಜಲವಿದ್ಯುತ್ ಯೋಜನೆಯ ಪ್ರಮುಖ ಜಲಾಶಯ ಸೂಪಾದ ಸಂಗ್ರಹಣಾ ಸಾಮರ್ಥ್ಯ 145.33 ಟಿಎಂಸಿ ಅಡಿ ಇದ್ದು, ಜುಲೈ 7 ರವರೆಗೆ 27.31 ಟಿಎಂಸಿ ಅಡಿ ಮಾತ್ರ ನೀರು ತುಂಬಿದೆ. ಎಂದರೆ ಒಟ್ಟಾರೆ ಸಾಮರ್ಥ್ಯದ ಶೇ.50 ರಷ್ಟು ಮಾತ್ರ ನೀರು ಸಂಗ್ರವಾದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ 96.94 ಟಿಎಂಸಿ ಅಡಿ ನೀರಿತ್ತು.
(ಜೂನ್1 ರಿಂದ ಆಗಸ್ಟ್8-ಕೆಎಸ್‌ಎನ್‌ಡಿಎಂಸಿ ವರದಿ)
ತಾಲೂಕು ಶೇ.ಮಳೆಯ ಕೊರತೆ
- ಅಂಕೋಲಾ -13
- ಭಟ್ಕಳ -35
- ಹಳಿಯಾಳ -46
- ಹೊನ್ನಾವರ -12
- ಕಾರವಾರ 00
- ಕುಮಟಾ -12
- ಮುಂಡಗೋಡ -28
- ಸಿದ್ದಾಪುರ +10
- ಶಿರಸಿ +03
- ಜೊಯಿಡಾ -01
- ಯಲ್ಲಾಪುರ -32
- ದಾಂಡೇಲಿ -21
ಪ್ರಸ್ತುತ ಮಳೆ ಹಾನಿ, ಮಳೆ ಕೊರತೆಯ ಹಾನಿ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಽಕಾರಿ ಅವರಿಗೆ ಸೂಚಿಸಿದ್ದೇನೆ. ನಾನೂ ಎರಡು ದಿನ ಜಿಲ್ಲೆಯಲ್ಲಿ ಪ್ರವಾಸ ನಡೆಸಿದ್ದು, ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದೇನೆ. ರೈತರ ರಕ್ಷಣೆಗೆ ಏನು ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಬರ, ನೆರೆ ಸಮೀಕ್ಷೆ ಜಿಲ್ಲಾ ಉಸ್ತುವಾರಿ ಸಚಿವ