ಶಿರಸಿ ಕೆಡಿಸಿಸಿ ಬ್ಯಾಂಕ್ ಸಿದ್ದಾಪುರದ ನಿರ್ದೇಶಕ ಸ್ಥಾನಕ್ಕೆ ರಾಘವೇಂದ್ರ ಶಾಸ್ತ್ರಿ ವಿಜಯಿಯಾದರು. ರಿಟನಿರ್ಂಗ್ ಅಧಿಕಾರಿ ಶಂಕರ ಗೌಂಡಿ ಇದ್ದರು.  
ಉತ್ತರ ಕನ್ನಡ

ಕೆಡಿಸಿಸಿ ಚುನಾವಣೆಯಲ್ಲಿ ರಾಘವೇಂದ್ರ ಶಾಸ್ತ್ರಿ ವಿಜಯಿ

ವಿನಯ ಆಶೋಕ ನಾಯ್ಕ
ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿಯ 16 ನಿರ್ದೇಶಕ ಸ್ಥಾನಗಳಲ್ಲಿ ಮತ ಎಣಿಕೆಗೆ ಬಾಕಿ ಇದ್ದ 2 ಸ್ಥಾನಗಳಲ್ಲಿ ಒಂದಾದ ಸಿದ್ದಾಪುರ ತಾಲೂಕು ಕೃಷಿ ಪ್ರಾಥಮಿಕ ಪತ್ತಿನ ಮತ ಕ್ಷೇತ್ರದ ಮತ ಎಣಿಕೆ ಸೋಮವಾರ ನಡೆಯಿತು. ಧಾರವಾಡ ನ್ಯಾಯಾಲಯದ ನಿರ್ದೇಶನದನ್ವಯ ಮತ ಎಣಿಕೆ ನಡೆದಿದ್ದು, ಹಾಲಿ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ವಿಜಯಿಯಾಗಿದ್ದಾರೆ.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಅಕ್ಟೋಬರ್ 25ರಂದು ಮತದಾನ ನಡೆದಿತ್ತು. ಸಿದ್ದಾಪುರ ತಾಲೂಕಿನ ಪ್ರಾಥಮಿಕ ಪತ್ತುಗಳ ಸಹಕಾರಿ ಸಂಘದ ಕ್ಷೇತ್ರಕ್ಕೆ ಬಾಲಚಂದ್ರ ಹೆಗಡೆ ಹಾಗೂ ರಾಘವೇಂದ್ರ ಶಾಸ್ತ್ರಿ ತಮ್ಮ ಉಮೇದುದಾರಿಕೆ ಸಲ್ಲಿಸಿದ್ದರು. 21 ಮತಗಳು ಈ ಕ್ಷೇತ್ರದಲ್ಲಿತ್ತಾರೂ ಒಂದು ಮತದ ಹಕ್ಕಿನ ಕುರಿತಂತೆ ಪ್ರಕರಣ ನ್ಯಾಯಾಲಯದ ಕಟಕಟೆ ಏರಿತ್ತು. ಹೀಗಾಗಿ, ವಿವಾದಿತ ಈ ಒಂದು ಮತವನ್ನು ಪ್ರತ್ಯೇಕ ಡಬ್ಬಕ್ಕೆ ಹಾಕಿ, ಇನ್ನುಳಿದ 20 ಮತಗಳನ್ನು ಇನ್ನೊಂದು ಡಬ್ಬದಲ್ಲಿಟ್ಟು ಮತ ಎಣಿಕೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ವಿವಾದಿತ ಮತವನ್ನೂ ಒಂದೇ ಡಬ್ಬದಲ್ಲಿ ಹಾಕಿದ ಕಾರಣ ಈ ಮತ ಕ್ಷೇತ್ರದ ಎಣಿಕೆಯನ್ನು ತಡೆಹಿಡಿಯಲಾಗಿತ್ತು. ಈಗ ನ್ಯಾಯಾಲಯದ ನಿರ್ದೇಶನದಂತೆ ಮತ ಎಣಿಕೆ ಮಾಡಿದಾಗ ರಾಘವೇಂದ್ರ ಶಾಸ್ತ್ರೀ 12 ಮತಗಳನ್ನು ಪಡೆದು ವಿಜಯಿಯಾದರೆ ಬಾಲಚಂದ್ರ ಹೆಗಡೆ 9 ಮತಗಳನ್ನು ಪಡೆದು ಪರಾಭವಗೊಂಡರು. ನೂತನ ನಿರ್ದೇಶಕ ರಾಘವೇಂದ್ರ ಶಾಸ್ತ್ರೀ ಅವರಿಗೆ ರಿಟನಿರ್ಂಗ್ ಅಧಿಕಾರಿ ಶಂಕರ ಗೌಂಡಿ ಪ್ರಮಾಣ ಪತ್ರ ವಿತರಿಸಿದರು.

ಇನ್ನೂ ಒಂದು ಕ್ಷೇತ್ರ ಬಾಕಿ

ಸೋಮವಾರದ ಮತ ಎಣಿಕೆಯೊಂದಿಗೆ 16 ನಿರ್ದೇಶಕ ಸ್ಥಾನಗಳ ಪೈಕಿ 15 ಸ್ಥಾನಗಳ ಮತ ಎಣಿಕೆ ಪೂರ್ಣಗೊಂಡಿದೆ. ಇನ್ನು ಗ್ರಾಹಕರ ಸಹಕಾರಿ ಸಂಘಗಳ ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದ ಮತ ಎಣಿಕೆ ಕಾರ್ಯ ಬಾಕಿ ಇದ್ದು, ನ್ಯಾಯಾಲಯದ ಅನುಮತಿ ಬಂದ ನಂತರ ಮತ ಎಣಿಕೆ ನಡೆಸಿ ವಿಜೇತರ ಘೋಷಣೆ ಆಗಲಿದೆ. ಈಗಾಗಲೇ ಕೆಡಿಸಿಸಿ ಬ್ಯಾಂಕ್‌ನಲ್ಲಿ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹಾಗೂ ಬೆಂಬಲಿಗರು ಬಹುಮತ ಸಾಧಿಸಿದ್ದು, ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೆ, ಮತ ಎಣಿಕೆ ಪೂರ್ಣಗೊಳ್ಳದ ಹೊರತು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವುದಿಲ್ಲ. ಹೊಸ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಲು ಸಾಧ್ಯವಿಲ್ಲ.