ಕಾರವಾರ: ವಿಶ್ವ ಪ್ರಸಿದ್ಧ ಕಾಳಿ ನದಿಯ ರ‍್ಯಾಫ್ಟಿಂಗ್ ಈಗ ವಿವಾದದ ಕೇಂದ್ರವಾಗಿದೆ. ರ‍್ಯಾಫ್ಟಿಂಗ್ ಜಟ್ಟಿ ಮಾಲೀಕರು ಹಾಗೂ ಟ್ರಾವಲ್ ಏಜೆಂಟರ ನಡುವೆ ಗಲಾಟೆ ನಡೆದು ಜೊಯಿಡಾದಲ್ಲಿ ಕಾಳಿ ನದಿ ರ‍್ಯಾಫ್ಟಿಂಗ್ ಮಂಗಳವಾರ ಹಾಗೂ ಬುಧವಾರ ಸ್ಥಗಿತವಾಗಿದೆ. ಸರಣಿ ರಜೆಗಳ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಜೊಯಿಡಾಕ್ಕೆ ಆಗಮಿಸಿದ್ದು, ರ‍್ಯಾಫ್ಟಿಂಗ್ ಇಲ್ಲದೇ ಗೊಂದಲ ಉಂಟಾಗಿದೆ. ರ‍್ಯಾಫ್ಟಿಂಗ್ ದರವನ್ನು ಹೆಚ್ಚಿಸಿದ ಸಂಬಂಧ ಕೆಲವು ಟ್ರಾವೆಲ್ ಏಜೆಂಟ್, ಹೋಂ ಸ್ಟೇ, ರೆಸಾರ್ಟ್ ಮಾಲೀಕರು ಮತ್ತು ಸೂಪಾ ಜಲಕ್ರೀಡಾ ಅಸೋಸಿಯೇಶನ್‌ನವರ ನಡುವೆ ಇಳವಾದ ಒನ್ ಕೌಂಟರ್ ಎದುರು ಮಂಗಳವಾರ ಗಲಾಟೆ ನಡೆದಿತ್ತು. ಪರಸ್ಪರ ಕೈ ಮಿಲಾಯಿಸಿಕೊಂಡಿದ್ದರು ಎನ್ನಲಾಗಿದೆ. ಇನ್ಸ್ಪೆಕ್ಟರ್ ಚಂದ್ರಶೇಖರ ಹಾಗೂ ಇತರ ಪೊಲೀಸರು ತೆರಳಿ ಗಲಾಟೆ ತಣ್ಣಗೆ ಮಾಡಿದ್ದಾರೆ. ಸ್ವಯಂ ಪ್ರೇರಿತ ದೂರು ದಾಖಲು:
ಮಾ.17 ರಂದು ಇಳವಾದಲ್ಲಿ ನಡೆದ ಗಲಾಟೆ ಸಂಬAಧ ರಾಮ ನಗರದ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಎಎಸ್‌ಐ ಎಫ್.ಎಸ್.ತಡಕೋಡ ಎಂಬುವವರು ಗಣೇಶಗುಡಿ ಹಾಗೂ ಇಳವಾದ ಶ್ಯಾಮಲಾ, ಕರೀಂ ಕತೀಬ್, ಸಂಜು ನಂದ್ಯಾಳಕರ್, ಪವನ ಕೊನ್ನೂರ, ಉದಯ, ಜೋಸೆಫ್ ಬೈಲಾ, ಸಚಿನ್ ಕಾಳೋಜಿ, ಚಾಂದ್ ಕುಟ್ಟಿ ಎಂಬುವವರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಕೂಗಾಡಿ, ಕೈ ಮಿಲಾಯಿಸಿ, ಶಾಂತಿಗೆ ಕುಂದು ತಂದಿದ್ದಾರೆ ಎಂದು ದೂರು ನೀಡಿದ್ದಾರೆ.
ಸಮಸ್ಯೆ ಏನು....?
ಕಾಳಿ ನದಿಯಲ್ಲಿ ಶಾರ್ಟ್ ರ‍್ಯಾಫ್ಟಿಂಗ್ ಹಾಗೂ ಇತರ ಜಲ ಸಾಹಸ ಕ್ರೀಡೆಗಳನ್ನು ನಡೆಸುವ ಸುಮಾರು 10 ಜಟ್ಟಿಗಳಿವೆ. ಆ ಎಲ್ಲ ಜಟ್ಟಿಗಳ ಮಾಲೀಕರು ಸೇರಿ ಸೂಪಾ ಜಲಕ್ರೀಡಾ ಅಸೋಸಿಯೇಶನ್‌ನ ಮಾಡಿಕೊಂಡು `ಒನ್' ಎಂಬ ಒಂದು ಕೇಂದ್ರ ಮಾಡಿಕೊಂಡು, ಜಲಸಾಹಸ ಕ್ರೀಡೆಗಳಿಗೆ ಏಕರೂಪದ ದರ ಆಕರಣೆ ಮಾಡುವ ಯತ್ನ ನಡೆಸಿದ್ದಾರೆ. ವಿವಿಧ ಜಲಸಾಹಸ ಕ್ರೀಡೆಗಳ ಪ್ಯಾಕೇಜ್‌ಗೆ ಈ ಮೊದಲು 200 ರಿಂದ 300 ರೂ. ಪಡೆಯುತ್ತಿದ್ದರು. ಈಗ ಅದನ್ನು 750 ರೂ.ಗೆ ಹೆಚ್ಚಿಸಿದ್ದು, ಟ್ರಾವೆಲ್ ಏಜೆಂಟ್‌ಗಳ ಆಕ್ಷೇಪಕ್ಕೆ ಕಾರಣವಾಗಿತ್ತು. ದಾಂಡೇಲಿಯಲ್ಲಿರುವ ಟ್ರಾವೆಲ್ ಏಜೆಂಟರು ಪ್ರತಿ ಪ್ರವಾಸಿಗರಿಂದ 1500 ರೂ.ವರೆಗೂ ಶುಲ್ಕ ಪಡೆದು, ತಮಗೆ ಕೇವಲ 200 ರೂ. ಮಾತ್ರ ನೀಡುತ್ತಾರೆ ಎಂಬುದು ಸೂಪಾ ಜಲಕ್ರೀಡಾ ಅಸೋಸಿಯೇಶನ್‌ನವರ ದೂರು. ಮಂಗಳವಾರ ಈ ವಿಷಯವನ್ನು ವಿಚಾರಿಸಲು ಬಂದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಆದರೆ, ಆ ನಂತರ ಸೂಪಾ ಜಲಕ್ರೀಡಾ ಅಸೋಸಿಯೇಶನ್‌ನವರು ರ‍್ಯಾಫ್ಟಿಂಗ್ ಬಂದ್ ಮಾಡಿದ್ದಾರೆ ಎನ್ನಲಾಗಿದೆ. ಇದು ಪ್ರವಾಸಿಗರನ್ನು ಕರೆದುಕೊಂಡ ಟ್ರಾವೆಲ್ ಏಜೆಂಟರು, ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮಧ್ಯ ಪ್ರವೇಶಿಸಿ ದರ ನಿಗದಿ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಸರ್ಕಾರಿ ದರದಂತೆ ರ‍್ಯಾಫ್ಟಿಂಗ್ ಶುಲ್ಕ ಪಡೆಯಬೇಕು. ಆದರೆ, ರ‍್ಯಾಫ್ಟಿಂಗ್ ನಡೆಸುವವರು ಹೆಚ್ಚು ಹಣ ಪಡೆಯುತ್ತಿದ್ದಾರೆ ಕ್ರಮ ವಹಿಸಬೇಕು ಎಂದು ಸುಮಾರು 20 ಜನ ಟ್ರಾವೆಲ್‌ಏಜೆಂಟ್ ಹಾಗೂ ಹೋಂ ಸ್ಟೇ ಮಾಲೀಕರು ಬಂದು ಮನವಿ ಸಲ್ಲಿಸಿದ್ದಾರೆ. ಅದನ್ನು ಸೂಕ್ತ ನಿರ್ಧಾರಕ್ಕಾಗಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಗೆ ಕಳಿಸಲಾಗಿದೆ.
ಮಂಜುನಾಥ ಮುನ್ನೊಳ್ಳಿ ಜೊಯಿಡಾ ತಹಸೀಲ್ದಾರ್