ರಿಂಗ್‌ ರೋಡ್‌ ವಿರೋಧಿಸಿ ಅಂಕೋಲಾ ನಾಗರಿಕರ ಸುದ್ದಿಗೋಷ್ಠಿ ನಡೆಸಿದರು.  
ಉತ್ತರ ಕನ್ನಡ

ಅಂಕೋಲಾ ರಿಂಗ್‌ ರೋಡ್‌ಗೆ ಜೆಎಸ್‌ಡಬ್ಲು ಹಣವೇಕೆ..?

ಕೇಣಿ ಬಂದರು ವಿರೋಧಿ ಹೋರಾಟಗಾರರ ಪ್ರಶ್ನೆ/ರಿಂಗ್‌ ರೋಡ್‌ಗೆ ವಿರೋಧ

ಕಾರವಾರ: ಜೆಎಸ್‌ಡಬ್ಲು ಕಂಪನಿಯ ಸಿಎಸ್‌ಆರ್ ನಿಽಯಿಂದ ಅಂಕೋಲಾದಲ್ಲಿ ರಿಂಗ್ ರಸ್ತೆ ತಯಾರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯ ಸಂಜೀವ ಬಲೆಗಾರ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಲ್ಲೂರಿನಿಂದ ಪ್ರಾರಂಭಿಸಿ ಬೊಗ್ರಿಬೈಲ್, ಬಾಳೆಗುಳಿ, ಕೃಷ್ಣಾಪುರ, ವಂದಿಗೆ ಶೆಟಗೇರಿ, ಸುರ್ವೆ ಕೊಗ್ರೆ, ಬಾಸಗೋಡು, ಬೆಳಂಬಾರ, ಬಾವಿಕೇರಿವರೆಗೆ 30 ಮೀಟರ್ ಅಗಲದ ರಿಂಗ್ ರಸ್ತೆಯನ್ನು ಪ್ರಸ್ತಾವಿಸಲಾಗಿದೆ. ಜೆಎಸ್‌ಡಬ್ಲು ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ ಈ ರಸ್ತೆ ಮಾಡುವುದಾಗಿ ಘೋಷಿಸಲಾಗಿದೆ. ನಾವು ಕೇಣಿಯಲ್ಲಿ ಜೆಎಸ್‌ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಸ್ತೆ ನಿರ್ಮಾಣಕ್ಕೂ ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದರು.

ರಿಂಗ್ ರಸ್ತೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿ ಹಲವು ದಿನಗಳಾಗಿವೆ. ಅಧಿಸೂಚನೆಯ ಪ್ರಕಾರ 6 ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಮನೆಗಳು, ಕೃಷಿ ಭೂಮಿಗಳು ಸ್ವಾಧೀನವಾಗಲಿವೆ. ಆದರೆ, ಆ ಬಗ್ಗೆ ಗ್ರಾಪಂಗೆ ಯಾವುದೇ ಮಾಹಿತಿ ಇಲ್ಲ. ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಎರಡು ದಿನ ಬಾಕಿ ಇರುವಾಗ ಗ್ರಾಪಂಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಲಾಗಿದೆ. ಹೆಚ್ಚಿನ ಜನರು ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗದೇ ಇರಲಿ ಎಂಬುದು ಅವರ ಸಂಚಾಗಿದೆ.

ಈ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಅಂಕೋಲಾದಲ್ಲಿ ಸಭೆ ಮಾಡಲಾಗಿದೆ ಎಂದು ನಮೂದಿಸಲಾಗಿದೆ. ಅದರಲ್ಲಿ 800 ಕ್ಕೂ ಅಽಕ ಕುಟುಂಬಗಳು 5 ಸಾವಿರ ಜನರು ಭಾಗವಹಿಸಿದ್ದರು ಎಂದು ತಿಳಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಂಥ ಯಾವುದೇ ಸಭೆಯಾದ ಮಾಹಿತಿ ನಮಗಿಲ್ಲ. ಇನ್ನು ಅಽಕಾರಿಗಳ ಸಭೆಯಲ್ಲಿ ಜೆಎಸ್‌ಡಬ್ಲು ಕಂಪನಿಯ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ನಮೂದಿಸಲಾಗಿದೆ. ಒಟ್ಟಿನಲ್ಲಿ ಜನರನ್ನು ಕತ್ತಲೆಯಲ್ಲಿಟ್ಟು ತಮಗೆ ಬೇಕಾದಂತೆ ಯೋಜನೆ ಜಾರಿಗೆ ಮುಂದಾಗಲಾಗಿದೆ ಎಂದರು.

ಚಂದ್ರಕಾಂತ ಹರಿಕಾಂತ, ಸವಿತಾ ಕಲ್ಮಠ, ಶಂಕರ ಬಲೆಗಾರ, ಗೋವಿಂದ ಗೌಡ, ಕೇಶವ ನಾಯ್ಕ ಬೊಗ್ರಿಬೈಲ್, ನೀಲೇಶ ಹರಿಕಂತ್ರ, ವಿನಾಯಕ ನಾಯ್ಕ ಕೇಣಿ, ಪ್ರಕಾಶ ಗೌಡ, ಗಣೇಶ ಗೌಡ, ಮಧುಕರ ಆಚಾರಿ, ಜಗದೀಶ ಗೌಡ, ಸೋಮೇಶ್ವರ ಭೋವಿ, ಅನಿಲ ತಾಂಡೇಲ, ಶೇಖರ ಹರಿಕಂತ್ರ, ಗಿರೀಶ ಹರಿಕಂತ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.