- ವ್ಯವಹಾರದ ಮಾತುಕತೆ ವೈರಲ್
- ಉತ್ತರ ಕನ್ನಡ ಪೊಲೀಸರ ಮಾನ ಹರಾಜು
ಕಾರವಾರ: ವರ್ಗಾವಣೆ, ಹಣಕಾಸಿನ ವ್ಯವಹಾರ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದ್ದ ಮೂವರು ಪಿಎಸ್‌ಐಗಳ ಆಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಅಮಾನತು ಮಾಡಲಾಗಿದೆ.
ಹಳಿಯಾಳ ಪಿಎಸ್‌ಐಗಳಾದ ಕಿರಣ ಪಾಟೀಲ, ಹಾಗೂ ಹಿಂದಿನ ಪಿಎಸ್‌ಐ ವಿನೋದ ರೆಡ್ಡಿ ಅವರನ್ನು ಅಮಾನತು ಮಾಡಿ ಎಸ್‌ಪಿ ದೀಪನ್ ಎಂ.ಎನ್.ಅವರು ಆದೇಶ ಮಾಡಿದ್ದಾರೆ.
ಮೂವರು ಪಿಎಸ್‌ಐಗಳದ್ದು ಎನ್ನಲಾದ ಆಡಿಯೋವೊಂದನ್ನು ಶನಿವಾರ ಜಾತ್ಯಾತೀತ ಜನತಾದಳ ಸೆಕ್ಯುಲಕರ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ರಾಜ್ಯದಲ್ಲಿ ಪೊಲೀಸ್ ರಾಜ್ಯ ನಡೆದಿದೆ ಎಂದು ಟೀಕಿಸಲಾಗಿತ್ತು. ಈ ಬಗ್ಗೆ ಎಸ್‌ಪಿ ದೀಪನ್ ಅವರು ಇಲಾಖಾ ತನಿಖೆಗೆ ಸೂಚಿಸಿದ್ದರು.
ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆದಿದ್ದು, ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇಲಾಖಾ ತನಿಖೆಯನ್ನು ಬಾಕಿ ಇರಿಸಿ, ಮುಂದಿನ ಆದೇಶದವರೆಗೆ ಮೂವರನ್ನು ಅಮಾನತು ಮಾಡಲಾಗಿದೆ. ಈ ಆಡಿಯೋದಲ್ಲಿ ಮೂವರು ಡಿವೈಎಸ್‌ಪಿ ಅವರ ಬಗ್ಗೆ ಮಾತನಾಡಿದ್ದು, ಇಲಾಖಾ ತನಿಖೆಯಲ್ಲಿ ಅದನ್ನೂ ಪರಿಗಣಿಸಲಾಗುವುದು ಎಂದು ಎಸ್‌ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.