ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಪಂ ಎದುರು ಗಣೇಶಪುರದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಸೋಮವಾರ ಪ್ರತಿಭಟನೆ (protest ) ನಡೆಸಿದರು.
ಮುಂಡಗೋಡ: ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಗಣೇಶಪುರ ಗ್ರಾಮದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಚಿಗಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ( protest )ನಡೆಸಿದರು.
ಕಳೆದ 3-4 ತಿಂಗಳಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚಿಸಿದ್ದರು. ಅದರಂತೆ ನೀರು ಪೂರೈಕೆ ಆಗುತ್ತಿತ್ತು. ಆದರೆ, ಕಳೆದ 15 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ಪಿಡಿಒ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕುಡಿಯುವ ನೀರು ಬಿಡುವ ನೌಕರ ಕಳೆದ ಕೆಲ ತಿಂಗಳಿಂದ ಸರಿಯಾಗಿ ನೀರು ಬಿಡುತ್ತಿಲ್ಲ. ಹೀಗಾಗಿ, ಈಗಿರುವ ನೌಕರನನ್ನು ಬದಲಾಯಿಸಿ ಬೇರೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಆಗ್ರಹಿಸಿದ್ದರು. ಆದರೆ, ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ನಿರ್ಲಕ್ಷಿಸಿದ ಪರಿಣಾಮ ಈಗ ನೀರಿಗಾಗಿ ಪರದಾಡುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸಮಸ್ಯೆ ಆಗಿರುವ ಕುರಿತು ಪಿಡಿಒಗೆ ಸರಿಯಾದ ಮಾಹಿತಿಯೇ ಇಲ್ಲ. ವಾಟರ್‌ಮನ್‌ನನ್ನು ಕೇಳಿದರೆ ಸಂಬಳ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಸಿಬ್ಬಂದಿಯನ್ನು ಕೇಳಿದರೆ ಸಂಬಳ ಕೊಡಲು ಹಣವಿಲ್ಲ, ಕೆಟ್ಟಿರುವ ಬೋರ್‌ವೆಲ್ ದುರಸ್ತಿಗೂ ಹಣವಿಲ್ಲ ಎಂದು ಹೇಳುತ್ತಾರೆ. ಹೀಗಾಗಿ, ಗ್ರಾಮದಲ್ಲಿ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಆರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಪಿಡಿಒ ಹೇಳುತ್ತಿದ್ದಂತೆ ಮಹಿಳೆಯರು ಪಿಡಿಒ ಅವರನ್ನು ತರಾಟೆ ತೆಗೆದುಕೊಂಡರು. ನಾವು 15 ದಿನಗಳಿಂದ ನೀರಿನ ಸಮಸ್ಯೆ ಎದುರಿಸುತಿದ್ದೇವೆ ಎಂದರು.
ಗಣೇಶಪುರ ಗ್ರಾಮದಲ್ಲಿ ಕಳೆದ ಆರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಿರುವ ಹಾಗೆ ನೋಡಿಕೊಳ್ಳುತ್ತೇವೆ.
— ಮಾನ್ವಿತಾ ನಾಯಕ ಪಿಡಿಒ ಚಿಗಳ್ಳಿ