ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು. 
ಉತ್ತರ ಕನ್ನಡ

ವಸತಿ ಯೋಜನೆ ಮನೆ ನೀಡುವಂತೆ ಪ್ರತಿಭಟನೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ದಾಂಡೇಲಿಯಲ್ಲಿ ಕೈಗೊಂಡಿರುವ ಜಿಪ್ಲಸ್2 ಮನೆಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಧರಣಿ ನಡೆಸಿದರು.
ಕೆಎಚ್‌ಬಿ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ನಗರಾಭಿವೃದ್ಧಿ ಕೋಶ (ಡಿಯುಡಿಸಿ) ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಖಾನ್ ಅವರಿಗೆ ಮನವಿ ಸಲ್ಲಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದಾಂಡೇಲಿಯಲ್ಲಿ 2016 ರಲ್ಲಿ ಜಿ ಪ್ಲಸ್ 2 ಮನೆಗಳ ಯೋಜನೆ ರೂಪಿಸಿ, 1106 ಮನೆಗಳ ನಿರ್ಮಾಣ ಕಾಮಗಾರಿಯನ್ನು 2018 ರಲ್ಲಿ ಆರ್‌ಎಸ್‌ಪಿ ಇನ್‌ಫ್ರಾ ಕನ್ಸ್ಸ್ಟಕ್ಷನ್‌ ಕಂಪನಿ ಕಾಮಗಾರಿ ಆರಂಭಿಸಿತ್ತು. ಕೆಎಚ್‌ಬಿ ಈ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಎರಡು ವರ್ಷಗಳಲ್ಲಿ 108 ಮನೆಗಳನ್ನು ಮಾತ್ರ ಮುಗಿಸಿ ಹಸ್ತಾಂತರಿಸಲಾಗಿದೆ. ಆದರೆ, 108 ಮನೆಗಳ ಗ್ರಾಹಕರು ಬ್ಯಾಂಕ್ ಸಾಲಕ್ಕಾಗಿ ಓಡಾಡುತ್ತಿದ್ದಾರೆ. 108 ಮನೆಗಳಿಗೆ ಸಂಪರ್ಕಿಸಲು ಸಮರ್ಪಕ ರಸ್ತೆ, ಬೀದಿ ದೀಪದ ಸೌಕರ್ಯವನ್ನು ನಗರಸಭೆ ನೀಡಿಲ್ಲ. ಅದಕ್ಕಾಗಿ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ಕಳೆದ 8 ತಿಂಗಳ ಹಿಂದೆ 84 ಮನೆಗಳ ಕಾಮಗಾರಿ ಮುಕ್ತಾಯವಾಗಿದೆ. ಆದರೆ, ಅದಕ್ಕೆ ಇದುವರೆಗೂ ವಿದ್ಯುತ್, ನೀರಿನ ಸಂಪರ್ಕ ಒದಗಿಸಿಲ್ಲ. ಇನ್ನು 912 ಮನೆಗಳ ಕಾಮಗಾರಿಯನ್ನು ಮಾಡದೇ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಈಗಾಗಲೇ ಹಲವು ಫಲಾನುಭವಿಗಳಿಂದ 50 ರಿಂದ 70 ಸಾವಿರ ರೂ.ಗಳನ್ನು ಸಂಗ್ರಹಿಸಲಾಗಿದೆ. ಒಟ್ಟಾರೆ 9 ಕೋಟಿ ರೂ.ಗಳನ್ನು ಫಲಾನುಭವಿಗಳಿಂದ ಸಂಗ್ರಹಿಸಿ ಅವರಿಗೆ ಮೋಸ ಮಾಡಲಾಗುತ್ತಿದೆ. ಸಂಪೂರ್ಣ ಕಾಮಗಾರಿ ಪೂರ್ಣವಾಗದೇ ಇದ್ದರೂ ಈಗಾಗಲೇ ಸರ್ಕಾರದಿಂದ ಗೃಹ ಮಂಡಳಿಗೆ 34 ಕೋಟಿ ರೂ.ಗಳ ಬಿಲ್ ಪಾವತಿ ಮಾಡಲಾಗಿದೆ ಎಂದು ಆರೋಪಿಸಿದರು.
ಡಿಯುಡಿಸಿ ಪಿಡಿ ಜಹೀರ್ ಅಬ್ಬಾಸ್ ಮನವಿ ಸ್ವೀಕರಿಸಿ, ಸ್ಥಳದಲ್ಲೇ ಕೆಎಚ್‌ಬಿ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದರು. ಪೂರ್ಣಗೊಂಡ 84 ಮನೆಗಳ ಶೀಘ್ರ ಹಸ್ತಾಂತರಕ್ಕೆ ಸೂಚಿಸಿದರು. ಅಲ್ಲದೇ, ಕಾರವಾರ ಕಚೇರಿಯಿಂದ ಬಾಕಿ ಇರುವ ಹಣ ಬಿಡುಗಡೆಗೆ ಕ್ರಮ ವಹಿಸುವುದಾಗಿ ತಿಳಿಸಿದರು. ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಉಪಾಧ್ಯಕ್ಷ ಅಶೋಕ ಪಾಟೀಲ, ಪದಾಧಿಕಾರಿಗಳಾದ ಮಧುಕರ ಸಾಂಗೇಕರ್, ನಾಮದೇವ ಶಿಕಾರಿಪುರ, ಅಶೋಕ ಗೋಪಾಲ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.