ಕೇಣಿ ನಾಗರಿಕರು ಪ್ರತಿಭಟನೆ ನಡೆಸಿದರು.  
ಉತ್ತರ ಕನ್ನಡ

ಕೇಣಿ ಬಂದರು ನಿರ್ಮಾಣ ವಿರೋಧಿಸಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ದೊಡ್ಡ ಸಂಖ್ಯೆಯಲ್ಲಿ ಬಂದ ಪ್ರತಿಭಟನಾಕಾರರು
  • ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ
ಕಾರವಾರ: ಅಂಕೋಲಾ ಕೇಣಿ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣ ವಿರೋಽಸಿ ಸ್ಥಳೀಯರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ವಾಹನಗಳ ಮೂಲಕ ಅಂಕೋಲಾದಿಂದ ಕಾರವಾರಕ್ಕೆ ಬಂದ ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೇಣಿ ವಾಣಿಜ್ಯ ಬಂದರು ವಿರೋಽ ಹೋರಾಟ ಸಮಿತಿಯ ಮುಖ್ಯಸ್ಥ ಸಂಜೀವ ಬಲೆಗಾರ, 2024 ರಿಂದ ಕೇಣಿ ಬಂದರು ವಿರೋಽಸಿ ಹೋರಾಟ ನಡೆಸಿದ್ಧೇವೆ. ಆದರೆ, ಇದುವರೆಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಮೀನುಗಾರಿಕೆ ಸಚಿವರು ಬಂದು ನಮ್ಮ ಸಮಸ್ಯೆ ಆಲಿಸಿಲ್ಲ. ಸ್ಥಳೀಯ ಶಾಸಕ ಸತೀಶ ಸೈಲ್ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸ್ಥಳಕ್ಕೆ ತೆರಳಿ ನಮ್ಮ ಬೇಡಿಕೆ ಆಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಾಗರ ವಿಜ್ಞಾನಿ ವಿ.ಎನ್.ನಾಯಕ, ಸಾರ್ವಜನಿಕ ಪರಿಸರ ಅಹವಾಲು ಸಭೆಯ ನಂತರ ಪರಿಸರ ಇಲಾಖೆಗೆ ಸಲ್ಲಿಕೆಯಾದ ವರದಿಯಲ್ಲಿ ಅಕ್ರಮ ನಡೆದಿದೆ. ಯೋಜನೆಯ ಪರವಾಗಿ ಮೃತರ ಹೆಸರುಗಳನ್ನು ಬಳಸಲಾಗಿದೆ. ಕೆಲವರ ಹೆಸರಿನಲ್ಲಿ ನಕಲಿಯಾಗಿ ಬಳಸಲಾಗಿದೆ ಇದರಿಂದ ಆ ವರದಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಮೀನುಗಾರಿಕೆ, ಕೃಷಿಯನ್ನು ನಂಬಿ ಸಾವಿರಾರು ಕುಟುಂಬಗಳು ಜೀವ ನಡೆಸುತ್ತಿವೆ. ಕೇಣಿ ವಾಣಿಜ್ಯ ಬಂದರು ಯೋಜನೆಯಿಂದ ಅವರ ಜೀವನ ನಡೆಸಲು ಸಮಸ್ಯೆಯಾಗಲಿದೆ. ಬಂದರು ಯೋಜನೆಯಿಂದ ಸ್ಥಳೀಯರಿಗೆಯಾವುದೇ ಉದ್ಯೋಗ ಸಿಗುವುದಿಲ್ಲ. ಕಲ್ಲಿದ್ದಲು, ಅದಿರು ನಮ್ಮ ಜಿಲ್ಲೆಯದಲ್ಲ. ಇದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ಕೇಣಿ ಬಂದರಿಗಾಗಿ ನೀರು, ಕಲ್ಲು ಮಣ್ಣನ್ನು ಎಲ್ಲಿಂದ ತರುತ್ತೀರಿ ಎಂಬುದಕ್ಕೆ ಸರಿಯಾದ ಉತ್ತರವಿಲ್ಲ . ಪಶ್ಚಿಮ ಘಟ್ಟವನ್ನು ಸಂಪೂರ್ಣ ನಾಶ ಮಾಡಲು ಯೋಜನೆ ಜಾರಿ ಮಾಡಲಾಗುತ್ತಿದೆ ಎಂದರು.
ಯೋಜನೆಗೆ ಅನುಮತಿ ದೊರೆಯುವುದಕ್ಕೂ ಮುಂಚೆಯೇ ಇಲ್ಲಿ ಭೂಮಿಯ ವ್ಯವಹಾರ ನಡೆದಿದೆ. ಹೊರ ಜಿಲ್ಲೆ, ರಾಜ್ಯದವರು ಬಂದು ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಯೋಜನೆ ಜಾರಿಗೂ ಮುಂಚೆಯೇ ಇಂಥ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.

ಬೇಡಿಕೆಗಳು:

ಕೇಣಿ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡಬೇಕು. ಕರ್ನಾಟಕ ಪೋರ್ಟ್ ಲಿಮಿಟೆಡ್ ಅಽಸೂಚನೆಯನ್ನು ರದ್ದುಪಡಿಸಬೇಕು. ಕರಾವಳಿಯಲ್ಲಿ ಯೋಜನೆ ರೂಪಿಸುವ ಮೊದಲು ಎಲ್ಲ ಪಾಲುದಾರರ ಜೊತೆ ಚರ್ಚೆ ನಡೆಸಬೇಕು. ಉತ್ತರಾಖಂಡ ರಾಜ್ಯದಲ್ಲಿ ಜಾರಿಯಲ್ಲಿರುವಂತೆ ಉತ್ತರ ಕನ್ನಡ ಜಿಲ್ಲೆಯ ಹೊರಗಿನವರಿಗೆ ಇಲ್ಲಿ ಭೂಮಿ ಖರೀದಿಗೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರಬೇಕು. ಸಿಆರ್ ಜಡ್ ಕಾಯ್ದೆಯಂತೆ ಸಿಜಡ್‌ಎಂಪಿ ಜಾರಿಗೆ ತರಬೇಕು. ಉತ್ತರ ಕನ್ನಡದಲ್ಲಿ ಎಲ್ಲ ರೆಡ್ ವರ್ಗಗಳ ಯೋಜನೆ ಜಾರಿಯನ್ನು ರದ್ದು ಮಾಡಬೇಕು ಎಂಬುದು ಸೇರಿ 10 ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಽಕಾರಿ ಅವರಿಗೆ ಸಲ್ಲಿಸಲಾಯಿತು.

ರಾಜಕೀಯದವರು ದೂರ

ಮಾಜಿ ಸಚಿವ ಆನಂದ ಅಸ್ನೋಟಿಕರ್, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ, ಗಣಪತಿ ಮಾಂಗ್ರೆ, ಬಿಜೆಪಿ ಮುಖಂಡ ನಾಗರಾಜ ನಾಯಕ ಹಾಗೂ ಇನ್ನೂ ಹಲವರು ಪ್ರತಿಭಟೆಗೆ ಬೆಂಬಲ ನೀಡಿ ಆಗಮಿಸಿದ್ದರು. ಆದರೆ ಯಾವುದೇ ಮುಖಂಡರಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ. ಇದು ಯಾವುದೇ ರಾಜಕೀಯ ಹೋರಾಟವಲ್ಲ ಎಂದು ಹೋರಾಟ ಸಮಿತಿ ಮುಖಂಡ ಸಂಜೀವ ಬಲೆಗಾರ ಸ್ಪಷ್ಟಪಡಿಸಿದರು. ಪ್ರತಿಭಟನೆಗೆೆ ಕೇವಲ ಕೇಣಿ ಭಾಗದ 105 ಗ್ರಾಮಗಳ ಜನ ಮಾತ್ರವಲ್ಲದೇ, ಭಟ್ಕಳದಿಂದ ಮಾಜಾಳಿವರೆಗಿನ ಎಲ್ಲ ಮೀನುಗಾರರೂ ಬೆಂಬಲ ಸೂಚಿಸಿದ್ದರು. ಕಾರವಾರ, ಅಂಕೋಲಾದಲ್ಲಿ ಮೀನುಗಾರಿಕೆ ಬಂದ್ ಮಾಡಲಾಗಿತ್ತು.