ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಸಭೆ ನಡೆಯಿತು
ಕಾರವಾರ:ಮಹಿಳೆಯನ್ನು ಪ್ರಕೃತಿ ಮಾತಿ, ಭೂ ಮಾತೆ, ಶಕ್ತಿ ದೇವತೆ , ಗ್ರಾಮ ದೇವತೆ ಎಂದು ಪೂಜಿಸುವ ಮತ್ತು
ವೈಚಾರಿಕತೆಯ ಹೊಗಳಿಕೆಯ ಬದಲು ಹೆಣ್ಣು ಭ್ರೂಣ ಹತ್ಯೆ ತಡೆಯಲು ಪ್ರತಿಯೊಬ್ಬರೂ ಪಣತೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.
ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ, ಅವರುಗಳ ಸಂಯುಕ್ತ ಆಶ್ರಯದಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (ಅಂಗ ಆಯ್ಕೆಯ ನಿಷೇಧ) ಅಧಿನಿಯಮ, 1994 ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಹೆಣ್ಣು ಮಕ್ಕಳೂ ಕೂಡಾ ಗಂಡು ಮಕ್ಕಳಂತೆ ಮನೆಯ ಜವಾಬ್ದಾರಿಗಳನ್ನು ವಹಿಸಿಕೊಂಡಿ ದುಡಿಯುವ ಜೊತೆಗೆ ದೈಹಿಕವಾಗಿಯೂ ಶಕ್ತರಾಗಿರುವ ಬಗ್ಗೆ ಸಾಬೀತುಪಡಿಸಿದ್ದಾರೆ, ಹೆಣ್ಣು ಮಕ್ಕಳ ಬಗ್ಗೆ ಈ ಹಿಂದೆ ಇದ್ದ ಮನಸ್ಥಿತಿ ಈಗ ಬಹುತೇಕ ಬದಲಾಗುತ್ತಿದ್ದು, ಇದು ಸಂಪೂರ್ಣ ಬದಲಾಗಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರಬಲವಾದ ಕಾನೂನುಗಳಿದ್ದರೂ ಕೂಡಾ ಇಂದಿಗೂ ತೆರಮೆರೆಯಲ್ಲಿ ಇದು ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಅರಿವು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿದಾಗ ಮಾತ್ರ ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಾಧ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ, ಈ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗಳನ್ನು ಮಾಡಿದ ರಾಜ್ಯಗಳಲ್ಲಿ ಯುವಕರಿಗೆ ಮದುವೆಯಾಗಲು ಯುವತಿಯರ ಕೊರತೆಯಿದ್ದು, ಇದು ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದನ್ನು ಕಾಣಬಹುದಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೂಡಾ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕಲೆವಡೆ ಪತ್ತೆ ಕಾರ್ಯ ನಡೆಯುತ್ತಿದ್ದು, ವಿದ್ಯಾವಂತರೇ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ಪ್ರತೀ ಮಗುವಿಗೂ ಜನಿಸುವ ಹಕ್ಕು ಇದೆ, ಹೆಣ್ಣು ಮಕ್ಕಳ ಪೋಷಣೆ ಈಗ ಪಾಲಕರಿಗೆ ಹೊರೆಯಲ್ಲ, ಸರ್ಕಾರ ಅವರಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇವುಗಳ ಪ್ರಯೋಜನ
ಪಡೆಯಬೇಕು, ಭ್ರೂಣ ಹತ್ಯೆ ತಡೆಯುವ ಬಗ್ಗೆ ಎಲ್ಲರೂ ಒಗ್ಗಟ್ಡಾಗಿ ಕೆಲಸ ಮಾಡುವ ಜವಾಬ್ದಾರಿ ಹೊರಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ರಾವ್, ವಕೀಲರಾದ ಕವಿತಾ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಅಮೃತಾ ನಾಯಕ್, ಶಿಕ್ಷಣ ಇಲಾಖೆಯ ಪ್ರಶಾಂತ್ ಇದ್ದರು. ಪೊಲೀಸ್, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.