ಮಾಜಾಳಿ ಜಾತ್ರೆಯಲ್ಲಿ ಹೊಟ್ಟೆಗೆ ಸೂಚಿ ಚುಚ್ಚಲಾಯಿತು.
ಕಾರವಾರ: ಜನಜಂಗುಳಿಯ ನಡುವೆ `ಅಯ್ಯಯ್ಯಯ್ಯೋ ಯೋ ಬಂಡಿ ಯೋ' ಎಂಬ ಚೀರಾಟ...ಬೊಬ್ಬೆ !! ಏನೋ ಅನಾಹುತ ಸಂಭವಿಸಿತು ಎಂದು ತಿಳಿದುಕೊಂಡರೆ ಅದು ತಪು÷್ಪ ಕಲ್ಪನೆ. ಅಲ್ಲಿ ಭಕ್ತಿಯ ಪರಾಕಾಷ್ಠೆ, ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.!!
ಇದು ಗೋವಾ ರಾಜ್ಯದ ಗಡಿಯಿಂದ 1 ಕಿಮೀಗೂ ಕಡಿಮೆ ಅಂತರದಲ್ಲಿರುವ ಕಾರವಾರ ಮಾಜಾಳಿಯ ಜಾತ್ರೆಯೊಂದರ ಚಿತ್ರಣ. ಇಲ್ಲಿ ಉಳಿದ ಜಾತ್ರೆಗಳಿಗಿಂತ ಭಿನ್ನವಾದ ವಿಶಿಷ್ಟ ಸಂಪ್ರದಾಯಗಳಿವೆ. ಸೋಮವಾರ ಅಂಥ ಹಲವು ವಿಶಿಷ್ಟ ಸಂಪ್ರದಾಯಗಳುಳ್ಳ ಮಾಜಾಳಿಯ `ಮಾರ್ಕೆ ಪುನವ್' ಎಂಬ ಜಾತ್ರೆ ಸಂಪನ್ನಗೊAಡಿತು. ಸಾವಿರಾರು ಕುಳಾವಿಗಳು (ದೇವರ ಭಕ್ತರು) ಹೊಟ್ಟೆಗೆ ಸೂಚಿ ಚುಚ್ಚಿಕೊಂಡು, ದೀವಜ್ ಹೊತ್ತು. ಬಂಡಿ ಎಳೆದು ತಮ್ಮ ಹರಕೆ ಒಪ್ಪಿಸಿ ಕೃತಾರ್ಥರಾದರು.
ಏನಿದರ ಹಿನ್ನೆಲೆ:
ಮಾಜಾಳಿಯ ರಾಮನಾಥ ದೇವರ ಪರಿವಾರ ದೇವರಾದ ದಾಡ(ಪುರುಷ) ಹಾಗೂ ದೇವತಿ(ಸ್ತಿçÃ) ದೇವರ ಜಾತ್ರೆಯಿದು. ಪ್ರತಿ ವರ್ಷ ಮಾಘ ಶುದ್ಧ ಹುಣ್ಣಿಮೆಯಂದು ನಡೆಯುತ್ತದೆ. ರಾಮನಾಥ ದೇವಸ್ಥಾನಕ್ಕೆ ನಡೆದುಕೊಳ್ಳುವ ಸಾವಿರಾರು ಕುಳಾವಿ ಎಂದು ಕರೆಯುವ ಭಕ್ತರು ಇಲ್ಲಿಗೆ ಬಂದು ಹರಕೆ ಒಪ್ಪಿಸುತ್ತಾರೆ. ಮುಂಚಿನ ದಿನ ಮಾಂಸ ಹಾಗೂ ಮದ್ಯದ ನೈವೇದ್ಯ ನಡೆಯುತ್ತದೆ. ಮರುದಿನ ವಿಭಿನ್ನ ಹರಕೆಗಳು ನಡೆಯುತ್ತವೆ. ಗೋವಾ, ಮಹಾರಾಷ್ಟçದಲ್ಲಿ ನೆಲೆಸಿರುವ ಹಲವರು ಜಾತ್ರೆಗೆ ಬಂದು ಹರಕೆ ಒಪ್ಪಿಸುತ್ತಾರೆ. ಹರಕೆಗಳಿಂದ ಊರಿಗೆ ರೋಗ ರುಜಿನಗಳು ಬರುವುದಿಲ್ಲ. ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ.
ಹೊಟ್ಟೆಗೆ ಸೂಜಿ:
ತಲೆಗೆ ಟೋಪಿ, ಅದಕ್ಕೊಂದು ಕನಕಾಂಬರ ಹೂ ಸಿಕ್ಕಿಸಿಕೊಂಡು, ಬಿಳಿ ಕುರ್ತಾ ಹಾಕಿಕೊಂಡು ಸಿದ್ಧವಾದ 10 ವರ್ಷ ಮೇಲ್ಪಟ್ಟ ಹಾಗೂ ಮದುವೆಗೂ ಮುಂಚಿನ ಗಂಡು ಮಕ್ಕಳ ಹೊಟ್ಟೆಗೆ ದಾಡ ದೇವಸ್ಥಾನದ ಎದುರು ಸೂಜಿಯಿಂದ ಚುಚ್ಚಿ ದಾರ ಪೋಣಿಸಲಾಗುತ್ತದೆ. ಹಾಗೆ ಹೊಟ್ಟೆಗೆ ಚಿಕ್ಕ ದಾರ ಪೋಣಿಸಿಕೊಂಡು ಯುವಕರು ಬರಿಗಾಲಲ್ಲಿ ಮೂರು ಕಿಮೀ ದೂರ ನಡೆದು, ದೇವತಿ ದೇವಸ್ಥಾನಕ್ಕೆ ತೆರಳಿ ಆ ದಾರವನ್ನು ಅರ್ಪಿಸಿ, ಹರಕೆ ತೀರಿಸುತ್ತಾರೆ. ರಾಮನಾಥ ದೇವರಿಗೆ ನಡೆದುಕೊಳ್ಳುವ ಕುಳಾವಿಗಳು ಮದುವೆಗೂ ಮುಂಚೆ ಒಮ್ಮೆ ಈ ಹರಕೆ ಒಪ್ಪಿಸುವ ರೂಢಿ ಇದೆ. ಹೊಟ್ಟೆಗೆ ಸೂಚಿ ಚುಚ್ಚುವ ಸಂದರ್ಭದಲ್ಲಿ ಪೂಜಾರಿಗಳು `ಅಯ್ಯಯ್ಯಯ್ಯೋ..' ಎಂದು ಬೊಬ್ಬೆ ಹೊಡೆಯುವಂತೆ ಸೂಚಿಸುತ್ತಾರೆ:
ದೀವಜ್ ಅರ್ಪಣೆ:
ಕುಳಾವಿ ಯುವತಿಯರು, ಹೊಸದಾಗಿ ಮದುವೆಯಾಗಿ ಬಂದ ಸೊಸೆಯಂದಿರು ವಿಭಿನ್ನ ಹರಕೆ ಒಪ್ಪಿಸುವ ಸಂಪ್ರದಾಯವಿದೆ. ಅವರು ದಾಡ ದೇವರಸ್ಥಾನದಲ್ಲಿ ಸ್ಥಳೀಯ ಕೊಂಕಣಿ ಭಾಷೆಯಲ್ಲಿ `ದೀವಜ್' ಎಂದು ಕರೆಯುವ ಐದು ಎಸಳಿನ ಹಣತೆಯ ದೀಪವನ್ನು ತಲೆಯ ಮೇಲೆ ಹೊತ್ತು ದೇವತಿ ದೇವಸ್ಥಾನದವರೆಗೆ ಬರಿಗಾಲಲ್ಲಿ ನಡೆದು, ದೇವರಿಗೆ ಹರಕೆ ಒಪ್ಪಿಸುತ್ತಾರೆ.
ಬಂಡಿ ಎಳೆಯುವುದು:
ಎಲ್ಲೆಡೆ ರಥವನ್ನು ಎಳೆಯುವ ಸಂಪ್ರದಾಯವಿದೆ. ಆದರೆ, ಇಲ್ಲಿ ರಥಕ್ಕಿಂತ ಭಿನ್ನವಾದ ಬಂಡಿಯೊAದನ್ನು ಎಳೆಯುವ ಸಂಪ್ರದಾಯವಿದೆ. ಬಂಡಿಗೆ ರಥದಂತೆ ನಾಲ್ಕು ಗಾಲಿಗಳಿರುತ್ತವೆ. ಆದರೆ, ಮೇಲೆ ಗೋಪುರ ಇರುವುದಿಲ್ಲ. ಕಬ್ಬಿನ ಗಾಣದ ಆಕಾರದ ಮರದ ದಿಮ್ಮಿ ಇರುತ್ತದೆ. ಅದನ್ನು ಕನಕಾಂಬರ ಹೂವಿನಿಂದ ಅಲಂಕರಿಸಿ ದಾಡ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಎಳೆಯಲಾಗುತ್ತದೆ. ಆದರೆ ಬಂಡಿಯಲ್ಲಿ ದೇವರ ಉತ್ಸವ ಮೂರ್ತಿಯೇನೂ ಇರುವುದಿಲ್ಲ. ದೀವಜ್ ಹೊತ್ತ ಮಹಿಳೆಯರು, ಹೊಟ್ಟೆಗೆ ದಾರ ಪೋಣಿಸಿಕೊಂಡ ಯುವಕರು ಮುಂದೆ ಹೋದ ಬಳಿಕ ಬಂಡಿ ಅದೇ ಮಾರ್ಗದಲ್ಲಿ ಸಾಗುತ್ತದೆ. ಬಂಡಿ ಎಳೆಯುವ ಸಂದರ್ಭದಲ್ಲಿ ಭಕ್ತರು `ಅಯ್ಯಯ್ಯಯ್ಯೋ ಯೋ ಬಂಡಿ ಯೋ' ಎಂದು ಕೂಗುತ್ತಾರೆ. ಅಯ್ಯಯ್ಯಯ್ಯೋ ಎಂಬುದು ಉದ್ಘಾರವಾದರೆ ಯೋ ಎಂದರೆ ಕೊಂಕಣಿಯಲ್ಲಿ ಬಾ ಎಂದು ಅರ್ಥ. ಎಂದರೆ `ಬಾ ಬಂಡಿ ಬಾ' ಎಂದು ಕೂಗಲಾಗುತ್ತದೆ.