ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಉಂಟುಮಾಡು ಹಂದಿಗಳು. 
ಉತ್ತರ ಕನ್ನಡ

pigs-harass ಮುಂಡಗೋಡದಲ್ಲಿ ಹಂದಿ ಕಿರಿಕಿರಿ ಮಂದಿ ಹೈರಾಣ

ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಉಂಟುಮಾಡುತ್ತಿದ್ದ ಹಂದಿಗಳು ಇದೀಗ ಜನರ ಮೇಲೆ ದಾಳಿ ನಡೆಸುತ್ತಿರುವುದರಿಂದ ಪಟ್ಟಣ ಪಂಚಾಯಿತಿ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕಾರ್ಮಿಕರೊಬ್ಬರ ಮೇಲೆ ಇತ್ತೀಚೆಗಷ್ಟೇ ಹಂದಿಯೊಂದು ದಾಳಿ ಮಾಡಿ ಗಾಯಗೊಳಿಸಿದೆ. ಪಟ್ಟಣ ವ್ಯಾಪ್ತಿಯಲ್ಲಿಯೇ ಹಂದಿಗಳು ಠಿಕಾಣಿ ಹೂಡಿಕೊಂಡು ಜನರಿಗೆ ತೊಂದರೆ ಕೊಡುತ್ತಿವೆ. ಕೆಲವೊಂದು ಬಾರಿ ಮನೆಗಳಿಗೂ ನುಗ್ಗಿ ಸಾಮಾನು ಸರಂಜಾಮುಗಳನ್ನು ಚೆಲ್ಲಾಪಿಲ್ಲಿಯಾಗಿಸುತ್ತಿವೆ.
ಪಟ್ಟಣ ವ್ಯಾಪ್ತಿಯ ಮಾರ್ಕೆಟ್ ಏರಿಯಾ, ಅಂಬೇಡ್ಕರ್ ಓಣಿ, ಕಂಬಾರಗಟ್ಟಿ, ಇಂದಿರಾನಗರ, ಆನಂದ ನಗರ ಸೇರಿದಂತೆ ಪಟ್ಟಣ ವಿವಿಧ ವ್ಯಾಪ್ತಿಯಲ್ಲಿ ಸುಮಾರು ದಿನಗಳಿಂದ ಹಂದಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ಗಲೀಜು ಮಾಡುತ್ತಿವೆ. ಹಂದಿಗಳು ಹಾಗೂ ಮರಿಗಳ ಹಿಂಡಿನೊಂದಿಗೆ ಮನೆಯ ಹಿತ್ತಲು ಮತ್ತು ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಚುತ್ತಾ ಜನರ
ನೆಮ್ಮದಿ ಹಾಳು ಮಾಡುತ್ತಿದೆ. ಅಲ್ಲದೆ, ಹಿತ್ತಲಲ್ಲಿ ಬೆಳೆದಿರುವ ತರಕಾರಿ ಗಿಡಗಳನ್ನು ಹಾಳು ಮಾಡುತ್ತಿದ್ದು, ಜನರಿಗೆ ಕಚ್ಚಲು ಬರುತ್ತಿವೆ. ಆದಷ್ಟು ಬೇಗನೆ ಸಂಬಂಧಪಟ್ಟ ಹಂದಿ ಮಾಲೀಕರಿಗೆ ತಿಳಿಸಿ ಅವುಗಳನ್ನು ಹಿಡಿದುಕೊಂಡು
ಹೋಗಲು ಕ್ರಮವಹಿಸಬೇಕು. ಈ ಕುರಿತು ಪಪಂ ಮುಖ್ಯಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದರೂ ಯಾವುದೆ ಕ್ರಮವಹಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಹಂದಿ ಮಾಲೀಕರಿಗೆ ಖಡಕ್ ಗಿ ಸೂಚಿಸಿ ಹಂದಿ ಹಿಡಿದು ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಪಪಂ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕಳೆದ ವರ್ಷವೂ ಹಂದಿಗಳ ಹಾವಳಿ ವಿಪರೀತವಾಗಿತ್ತು. ಪಪಂಗೆ ಮನವಿ ಸಲ್ಲಿಸಿದ ನಂತರ ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು. ಇದೀಗ ಮತ್ತೆ ಓಣಿಯಲ್ಲಿ ಹಂದಿಗಳ ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಹಿತ್ತಲಿನಲ್ಲಿ ಬಂದು ಒದರುತ್ತ ಜನರ ನೆಮ್ಮದಿ ಹಾಳುಮಾಡುತ್ತಿದೆ. ಅಲ್ಲದೆ, ಹೋಟೆಲ್‌ಗಳ ಹಿಂದೆ ಮುಂದೆ ಓಡಾಡುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

— ಇಲಂಗೋವನ್ ತೇವರ್ ಸ್ಥಳೀಯ ನಿವಾಸಿ

ಆರು ತಿಂಗಳ ಹಿಂದೆ ಹಂದಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಜನರಿಂದ ದೂರುಗಳು ಬಂದಿವೆ. ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.

— ಸಂತೋಷಕುಮಾರ ಎಚ್., ಪಪಂ ಮುಖ್ಯಾಧಿಕಾರಿ