ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಹಮ್ಮಿಕೊಂಡಿರುವ ಭಾರತೀಯ ಜೀವನ ಶಿಕ್ಷಣ ಶಿಬಿರವನ್ನು ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ರಾಮಕೃಷ್ಣ ಭಟ್ಟ, ಶಂಕರ ಭಟ್ಟ, ಮಹಾದೇವಿ ಭಟ್ಟ ಇದ್ದರು. 
ಉತ್ತರ ಕನ್ನಡ

ಸಂಸ್ಕಾರಯುತ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ

ವಿನಯ ಆಶೋಕ ನಾಯ್ಕ
ಯಲ್ಲಾಪುರ: ಪ್ರತಿನಿತ್ಯ ತಂದೆ, ತಾಯಿ ಹಾಗೂ ಗುರುಗಳಿಗೆ ನಮಿಸಿಯೇ ನಮ್ಮ ಕಾರ್ಯಗಳನ್ನು ಆರಂಭಿಸುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಹಮ್ಮಿಕೊಂಡಿರುವ ಭಾರತೀಯ ಜೀವನ ಶಿಕ್ಷಣ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನ್ಮ ನೀಡಿದ ತಾಯಿ ಹಾಗೂ ಭೂ ತಾಯಿಗಿಂತಲೂ ಮಿಗಿಲಾದದ್ದಿಲ್ಲ. ಭೋಗದ ಸಂಸ್ಕೃತಿ ನಮ್ಮದಲ್ಲ. ಬೆಳಕನ್ನು ನೀಡುವ ಸಂಸ್ಕೃತಿ ನಮ್ಮದು. ನಮ್ಮ ಮಕ್ಕಳಿಗೆ ಆಧುನಿಕ ಶಿಕ್ಷಣದ ಜತೆ ಇಂತಹ ಸಂಸ್ಕಾರದ ಅಗತ್ಯವಿದೆ. ಈ ಶಿಬಿರದಲ್ಲಿ ಯೋಗದಿಂದ ಪ್ರಾರಂಭಗೊಂಡು ಜೀವನಕ್ಕೆ ಬೇಕಾದ ಎಲ್ಲ ಸಂಸ್ಕಾರಯುತ ಚಿಂತನೆಗಳನ್ನು ಹತ್ತು ದಿನಗಳ ಕಾಲ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಶ್ರೇಷ್ಠ ಸಾಧಕರಿಗೆ, ಹಿರಿಯರಿಗೆ, ಸಜ್ಜನರಿಗೆ, ಜ್ಞಾನಿಗಳಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ಅಂತಹ ಗೌರವವನ್ನು ನಾವೂ ಪಡೆಯುವಂತಾಗಲು ಜನ್ಮ ನೀಡಿದ ತಂದೆ-ತಾಯಿಗಳ ಮಾತನ್ನು ತಪ್ಪದೇ ಪಾಲಿಸಬೇಕು. ಗುರು, ಹಿರಿಯರ ಮಾತನ್ನೂ ಗೌರವಿಸಬೇಕು. ಜೀವನದಲ್ಲಿ ಸಾಧನೆಗೆ ಶಿಸ್ತು, ಶ್ರಮ ಅತ್ಯಂತ ಮಹತ್ವವಾದದ್ದು. ಶಾಲೆಗಳಲ್ಲಿ ಪಠ್ಯಕ್ರಮಕ್ಕೆ ಪೂರಕವಾದ ಪಾಠ ಪ್ರವಚನ ನಡೆಸಲಾಗುತ್ತದೆ. ಆದರೆ, ನಮ್ಮ ಸಂಸ್ಥೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂಬ ಸದಿಚ್ಛೆಯಿಂದ ಕಳೆದ ವರ್ಷದಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ ಎಂದರು.
ಶಿಬಿರದ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ವಿಶ್ವದರ್ಶನ ಶಿಕ್ಷಣ ಸಮೂಹದ ನಿರ್ದೇಶಕ ವಿಘ್ನೇಶ್ವರ ಗಾಂವ್ಕರ, ಸಿಬಿಎಸ್‌ಸಿ ವಿಭಾಗದ ಪ್ರಾಂಶುಪಾಲೆ ಮಹಾದೇವಿ ಭಟ್ಟ, ಶಿಬಿರದ ಸಂಘಟಕರಾದ ರಾಮಕೃಷ್ಣ ಕವಡಿಕೆರೆ, ಸಮರ್ಥ ಗಾಂವ್ಕರ ಉಪಸ್ಥಿತರಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಕೆ. ಗಾಂವ್ಕರ ಸ್ವಾಗತಿಸಿದರು. ಶಿಕ್ಷಕ ಶಿವಪ್ರಸಾದ ಭಟ್ಟ ನಿರ್ವಹಿಸಿದರು.