ಪರ್ತಗಾಳಿ ಮಠಕ್ಕೆ ಆಗಮಿಸಿದ ಕಾಶಿ ಮಠಾಧೀಶರು 
ಉತ್ತರ ಕನ್ನಡ

ಭಗವಂತನನ್ನು ಒಲಿಸಿಕೊಳ್ಳುವ ಸುಲಭ ಮಾರ್ಗವೆಂದರೆ ರಾಮ ಸ್ಮರಣೆ

ಪರ್ತಗಾಳಿ : ಈ ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸಹಜ ಮತ್ತು ಸುಲಭ ಸಾಧನವೆಂದರೆ ಅದು ಶ್ರೀರಾಮ ನಾಮ ಸ್ಮರಣೆ. ಇದು ನೇರವಾಗಿ ವೇದ ಮಂತ್ರಕ್ಕೆ ಸಮಾನವಾಗಿದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಕರೆ ನೀಡಿದರು.
ಇಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜೀವೋತ್ತಮ ಸಭಾ ಮಂಟಪದಲ್ಲಿ ನಡೆದ ಸಾರ್ಧ ಪಂಚಶತಮಾನೋತ್ಸವದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಮುಂದಿನ ಜನ್ಮದಲ್ಲಿ ಮನುಷ್ಯ ಜೀವನ ಸಿಗುತ್ತದೆಯೋ ಇಲ್ಲವೋ ಎಂಬ ಅನಿಶ್ಚಿತತೆ ಇರುವುದರಿಂದ, ಸಮಸ್ತ ಭಕ್ತ ಜನರೂ ಇಲ್ಲಿಗೆ ಇದನ್ನು ನಿಲ್ಲಿಸದೆ ನೀರಂತರವಾಗಿ ಶ್ರೀರಾಮ ನಾಮ ಮಂತ್ರವನ್ನು ಜಪಿಸಬೇಕು ಎಂದು ಸೂಚಿಸಿದರು.
ಲೌಕಿಕ ಜ್ಞಾನಕ್ಕಿಂತ ಆಧ್ಯಾತ್ಮಿಕ ಜ್ಞಾನ ಶ್ರೇಷ್ಠ
ಯಾವುದೇ ಜಾತಿ ಅಥವಾ ಭೇದವಿಲ್ಲದೆ, ಪ್ರತಿ ಮನುಷ್ಯ ಜೀವಕ್ಕೂ ಭಗವಂತನ ದಯೆ ಇರಲೇಬೇಕು. ಶರೀರ ಮತ್ತು ಜೀವವನ್ನು ಪರಮಾತ್ಮನೇ ನೀಡಿದ್ದಾನೆ. ಲೌಖಿಕ ಜ್ಞಾನ ಯಾರಿಗಾದರೂ ಸಿಗಬಹುದು, ಆದರೆ ಆಧ್ಯಾತ್ಮಿಕ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಯೋಗ್ಯ ಗುರುಗಳು ಬೇಕು. ಈ ಗೋಕರ್ಣ ಮಠಕ್ಕೆ ಅಂತಹ ಯೋಗ್ಯ ಗುರುಗಳು ದೊರಕಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ಧರ್ಮ ಪಾಲನೆಗೆ ಒತ್ತು
ಗುರು ವಿದ್ಯಾಧಿರಾಜ ಶ್ರೀಗಳು ವಿದ್ಯಾಧೀಶರಿಗೆ ಸೂಕ್ತ ಸಮಯದಲ್ಲಿ ದೀಕ್ಷೆ ಧಾರೆ ಎರೆದು, ಜ್ಞಾನ-ಮಾರ್ಗದರ್ಶನ ನೀಡಿ, ಧರ್ಮ ಪಾಲನೆ, ಸಾಧನ, ಮಠದ ಪರಂಪರೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಜ್ಞಾನವನ್ನು ಪ್ರಾಪ್ತಿ ಮಾಡಿಕೊಟ್ಟಿದ್ದಾರೆ. ವಿದ್ಯಾಧಿರಾಜ ಶ್ರೀಗಳು ಪ್ರತಿ ವಿಷಯವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದರು ಎಂದ ಅವರು, ಎಂಥದೇ ಸಂದರ್ಭ ಎದುರಾದರೂ ಧರ್ಮವನ್ನು ಯಾವತ್ತೂ ಬಿಡಬಾರದು. ಪರ್ತಗಾಳಿ ಮಠದಲ್ಲಿ ಧರ್ಮ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಹಿರಿಯ ಗುರುಗಳ ಮಾರ್ಗದರ್ಶನದಂತೆ ೨೦೨೧ರಿಂದ ೨೦೨೫ರೊಳಗೆ ಇಷ್ಟೊಂದು ಬದಲಾವಣೆ, ಮಠಪರಂಪರೆಯ ಸೊಬಗು ಕಂಡು ಅತೀವ ಸಂತೋಷವಾಗಿದೆ ಎಂದರು.
ಇದೇ ವೇಳೆ, ಬ್ರಾಹ್ಮಣರ ಕರ್ತವ್ಯ ಕುರಿತು ಮಾತನಾಡಿದ ಅವರು, ವಿಪ್ರತ್ವ ಎಂದರೆ ವೇದಗಳ ಅನುಷ್ಠಾನ ಕಲಿಯುವುದು. ಈಗಿನ ಕಾಲದಲ್ಲಿ ಯಾರೂ ಸೂಕ್ಷ್ಮವಾಗಿ ವಿಚಾರ ಮಾಡುತ್ತಿಲ್ಲ, ಸ್ಥೂಲಬುದ್ಧಿಯಿಂದ ಯೋಚಿಸುತ್ತಾರೆ. ಈಗ ಪ್ರತಿ ವಿಷಯವೂ ಯಾಂತ್ರಿಕವಾಗಿದೆ. ಪಾರಂಪರಿಕವಾಗಿ ನಡೆದುಬಂದಿರುವ ಸಂಸ್ಕೃತಿಗಳನ್ನು ಪಾಲಿಸಬೇಕು ಮತ್ತು ಮಹಾದೇವನಿಂದ ಜ್ಞಾನ ಪ್ರಾಪ್ತಿ ಮಾಡಿಕೊಂಡರೆ ವಿಷ್ನುವಿನಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.
ತ್ರಿವೇಣಿ ಸಂಗಮ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಉಭಯ ಮಠಗಳ ನಡುವೆ ಅನೋನ್ಯ ಬಾಂಧ್ಯವ್ಯವಿದೆ. ನಮ್ಮ ಶ್ರೀರಾಮ ನಾಮ ಸಂಕಲ್ಪ ಈಡೇರಲು ಶ್ರೀಗಳು ಖುದ್ದಾಗಿ ಅವರ ಶಿಷ್ಯರಿಗೆ ಶ್ರೀರಾಮನಾಮ ಜಪ ಪಠಿಸುವಂತೆ ಸೂಚಿಸಿದ್ದರು. ಒಂದೇ ಸಂವತ್ಸರದಲ್ಲಿ ೩ ಸ್ಥಳಗಳಲ್ಲಿ ಉಭಯ ಶ್ರೀಗಳ ಮಿಲನದಿಂದ ಕೈವಲ್ಯ ಹಾಗೂ ಪರ್ತಗಾಳಿ ಮಠಗಳ ತ್ರಿವೇಣಿ ಸಂಗಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಠದ ಸಾಮೂಹಿಕ ಸಾಧನೆ ಕುರಿತು ಮಾಹಿತಿ ನೀಡಿದ ಅವರು,ಗೋವಾದ ಸಚಿವ ದಿಗಂಬರ ಕಾಮತ, ಮಾಜಿ ಐಪಿಎಸ್ ಅಧಿಕಾರಿ ನೀತಿನ ಗೋಕರ್ಣ ಸೇರಿದಂತೆ ಇತರರ ಮಠದೊಂದಿಗಿನ ಒಡನಾಟದ ವಿವರಣೆ ನೀಡಿದರು. ಗೋಕರ್ಣ ಮತ್ತು ಕವಳೆ ಮಠದ ನಡುವಿನ ಅವಿನಾಭಾವ ಸಂಬAಧವು ಮುಂದಿನ ದಿನಗಳಲ್ಲೂ ಹೀಗೆಯೇ ಅನ್ಯೋನ್ಯವಾಗಿರಲಿ ಎಂದು ಆಶಿಸಿದರು.
ಗೋವಾ ಸರ್ಕಾರಕ್ಕೆ ಹೆಮ್ಮೆ
ಗೋವಾ ಲೋಕೋಪಯೋಗಿ ಸಚಿವರಾದ ದಿಗಂಬರ ಕಾಮತ ಅವರು ಮಾತನಾಡಿ, ಈ ಸಾರ್ಧ ಪಂಚಶತಮಾನೋತ್ಸವವು ಅವಿಸ್ಮರಣೀಯ ಕಾರ್ಯಕ್ರಮವಾಗಿದ್ದು, ಇತಿಹಾಸದಲ್ಲಿ ಬರೆದಿಡುವಂಥದ್ದು. ಗೋಕರ್ಣ ಮಠ ಗೋವಾದಲ್ಲಿರುವುದು ಗೋವಾದ ಜನತೆ ಮತ್ತು ನಮ್ಮ ಸರ್ಕಾರಕ್ಕೆ ಹೆಮ್ಮೆಯ ಸಂಗತಿ ಎಂದರು. ಯುವಜನಾಂಗವನ್ನು ಧರ್ಮದೆಡೆಗೆ ಆಕರ್ಷಿಸುವ ಶಕ್ತಿ ಶ್ರೀ ವಿದ್ಯಾಧೀಶರಲ್ಲಿದೆ, ಇದರ ಲಾಭವನ್ನು ಸಮಾಜ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಮಠ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಡೆಂಪೋ ಸ್ವಾಗತಿಸಿದರು. ರಾಮಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶಿವಾನಂದ ಸಾಲಗಾಂವಕರ್, ಆರ್.ಆರ್.ಕಾಮತ್, ಹಿರಿಯ ಐಪಿಎಸ್ ಅಧಿಕಾರಿ ಶ್ರೀನಿವಾಸ್ ಗೋಕರ್ಣ, ರಾಜೇಂದ್ರ ದೇಶಪಾಂಡೆ, ಮುಕುಂದ ಕಾಮತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು