ಭಟ್ಕಳ/ಕಾರವಾರ: ಬದುಕಿಗೆ ಆಧಾರವಾಗಿದ್ದ ಜೀವನದಿಯೇ ಬಡ ಜೀವಗಳನ್ನು ಆಪೋಶನ ಪಡೆದಿದೆ. ಭಟ್ಕಳ ಪಳ್ಳಿ ಹೊಳೆಯ ದುರಂತ ಹಲವು ಮನೆಗಳ ದೀಪವನ್ನು ಆರಿಸಿದೆ. 24 ಮಕ್ಕಳನ್ನು ಅನಾಥವಾಗಿಸಿದೆ. 10ಕ್ಕೂ ಹೆಚ್ಚು ಹಿರಿಯ ಜೀವಗಳ ಆಧಾರ ಕಸಿದುಕೊಂಡಿದೆ. ಪಡುಶಿರಾಲಿ ಊರನವನ್ನು ನೀರವ ಮೌನದಲ್ಲಿ ಮುಳುಗಿಸಿದೆ.
ಸಾರದಹೊಳೆ ಪಡುಶಿರಾಲಿಯ ನಾಯ್ಕರ ಕುಟುಂಬ ಚಿಪ್ಪಿಕಲ್ಲು ಸಂಗ್ರಹಿಸಿ ಮಾರಾಟ ಮಾಡುವುದನ್ನು ಜೀವನಾಧಾರ ಮಾಡಿಕೊಂಡಿತ್ತು. ಪಳ್ಳಿ ಹೊಳೆಗೆ ಹೋಗಿ ಚಿಪ್ಪಿಕಲ್ಲು ಸಂಗ್ರಹಿಸುವುದು ಕುಟುಂಬದವರಿಗೆ ಹೊಸದಲ್ಲ. ಪುರುಷರು ಮಾತ್ರವಲ್ಲ ಮಹಿಳೆಯರೂ ಈಜು ಬಲ್ಲವರು ಆದರೆ, ಭಾನುವಾರದ ವಿಧಿಯ ನಿರ್ಧಾರವೇ ಬೇರೆ ಇತ್ತು. ಅದಕ್ಕೆ 10 ಜನ ಬಲಿಯಾಗಿದ್ದಾರೆ. ಒಂದು ಮನೆಯಲ್ಲಿ ತಾಯಿ ಮಗ ಇಲ್ಲ. ಇನ್ನೊಂದು ಮನೆಯ ಪತಿ, ಪತ್ನಿಯೇ ಇಲ್ಲ. ಮತ್ತೊಂದು ಮನೆಯ ಇಬ್ಬರು ಸೊಸೆಯಂದಿರಿಲ್ಲ. ಹೀಗೆ ಮೃತರ ಕುಟುಂಬಗಳ ಕತೆ ಕೇಳುತ್ತ ಹೋದರೆ ಕರುಳು ಕಿತ್ತು ಬರುತ್ತದೆ.
ಮೃತಪಟ್ಟ 10 ಜನರೆಲ್ಲರೂ ದುಡಿದು ಮನೆ ನಡೆಸುವ 24 ರಿಂದ 60 ವರ್ಷದವರಾಗಿದ್ದಾರೆ. ಇದರಿಂದ 6 ಕ್ಕೂ ಹೆಚ್ಚು ಮನೆಗಳು ಈಗ ಜೀವನೋಪಾಯದ ದಿಕ್ಕು ಕಳೆದುಕೊಂಡಿವೆ. ಈ ಮನೆಗಳಲ್ಲಿ ಪ್ರಾಥಮಿಕ ಶಾಲೆಯಿಂದ ಕಾಲೇಜ್‌ಗೆ ತೆರಳುವ ಒಟ್ಟು 12 ಜನ ಗಂಡು ಮಕ್ಕಳು, 12 ಜನ ಹೆಣ್ಣು ಮಕ್ಕಳಿದ್ದರು. ಓದು, ಉದ್ಯೋಗ, ಮದುವೆ, ಸಂಸಾರ ಹೀಗೆ ಹತ್ತಾರು ಕನಸು ಕಟ್ಟಿದ್ದರು. ಎಲ್ಲರೂ ಪಾಲಕರನ್ನು ಕಳೆದುಕೊಂಡು ದಿಕ್ಕು ತೋಚದೇ ಕುಳಿತಿದ್ದಾರೆ. ಮನೆಯಲ್ಲಿದ್ದ ವೃದ್ಧರು ಮಕ್ಕಳನ್ನು ಕಳೆದುಕೊಂಡು ದಿಕ್ಕು ತೋಚದಂತೆ ಕಣ್ಣೀರಿಡುತ್ತ ಕುಳಿತಿದ್ದಾರೆ.
ಭಟ್ಕಳದಲ್ಲಿಯೇ ಹುಟ್ಟಿ ಹರಿದು ಸಮುದ್ರ ಸೇರುವ ಸಣ್ಣ ನದಿಯದು. ವೆಂಕಟಾಪುರ, ಮುಂದೆ ಹೋದಂತೆ ಅದಕ್ಕೆ ತಟ್ಟಿಹಕ್ಕಲ ಹೊಳೆ, ಪಳ್ಳಿಹೊಳೆ ಎಂಬೆಲ್ಲ ಹೆಸರಿದೆ. ಅಳ್ವೆಕೋಡಿ ಸಮೀಪ ಹೊಳೆ ಸಮುದ್ರ ಸೇರುತ್ತದೆ. ಸಮುದ್ರದ ಉಬ್ಬರರ ಇಳಿತದ ಸಮಯದಲ್ಲಿ ಈ ಹೊಳೆಯ ನೀರಿನ ಪ್ರಮಾಣದಲ್ಲೂ ವ್ಯತ್ಯಾಸವಾಗುತ್ತದೆ.
ಭಾನುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಇಬ್ಬರು ಗಂಡಸರು ಹಾಗೂ 12 ಜನ ಮಹಿಳೆಯರು ಚಿಪ್ಪಿಕಲ್ಲು ಹೆಕ್ಕಲು ಪಳ್ಳಿ ಹೊಳೆಗೆ ಹೋಗಿದ್ದರು. ಇಳಿತದ ಸಮಯವಾಗಿದ್ದರಿಂದ ನಡೆದುಕೊಂಡೇ ಹೊಳೆ ದಾಟಿ ಆಚೆ ಹೋಗಿ ಚಿಪ್ಪಿ (ಸ್ಥಳೀಯ ಭಾಷೆಯಲ್ಲಿ ಮಳ್ವಿ)ಸಂಗ್ರಹಿಸುತ್ತಿದ್ದರು. 12 ಗಂಟೆಯ ಹೊತ್ತಿಗೆ ಇದ್ದಕ್ಕಿದ್ದಂತೆ ನದಿಯ ನೀರು ಏರಿರುತ್ತ ಬಂದಿದೆ. ಹವಾಮಾನ ವೈಪರೀತ್ಯದ ಕಾರಣ ಸಮುದ್ರವೂ ಅಬ್ಬರಿಸುತ್ತಿತ್ತು. ಅಲ್ಲದೇ, ಬೆಳಗಿನಜಾವ ಭಾರಿ ಮಳೆಯಾಗಿದ್ದರಿಂದ ಸಾಮಾನ್ಯಕ್ಕಿಂತ ಹೆಚ್ಚು ನೀರು ಬಂದಿತ್ತು. ನೀರಿನ ಉಬ್ಬರ ಇನ್ನಷ್ಟು ಹೆಚ್ಚುವುದರೊಳಗೆ ಹೊಳೆದಾಟಿಬಿಡಬೇಕು ಎಂಬ ಅವಸರ್‌ಲ್ಲಿ ನಾಯ್ಕರ ಕುಟುಂಬದವರು ನದಿ ದಾಟಲು ಹೊರಟಿದ್ದಾರೆ. ಆದರೆ, ನೀರಿನ ಸೆಳೆತ ಜಾಸ್ತಿ ಇದ್ದ ಕಾರಣ ಮಹಿಳೆಯರು ನೀರಿನಲ್ಲಿ ಮುಳುಗಿದ್ದರು.
ಸ್ಥಳದಲ್ಲಿದ್ದ ಯುವಕ ಉಮೇಶ ಮಂಜುನಾಥ ನಾಯ್ಕ ಒಬ್ಬ ಮಹಿಳೆಯನ್ನು ರಕ್ಷಿಸಿ ಸ್ಥಳಕ್ಕೆ ಬಿಟ್ಟರು. ಇನ್ನೊಬ್ಬರನ್ನು ಕರೆತರಲು ವಾಪಸ್ ನೀರಿಗೆ ಹೋಗಿದ್ದ ಆದರೆ, ನೀರಿನ ಸೆಳೆತಕ್ಕೆ ದಿಕ್ಕು ತೋಚದಂತಾದ ಇತರ ಮಹಿಳೆಯರು ಆತನ ಕಾಲು ಹಿಡಿದುಕೊಂಡರು. ಇದರಿಂದ ಅವರ ಜೊತೆ ಆತನೂ ಮುಳುಗುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯನ್ನು ವಿವರಿಸುತ್ತಾರೆ. ಸ್ಥಳದಲ್ಲಿದ್ದ ಇನ್ನೊಬ್ಬರು ಒಬ್ಬ ಮಹಿಳೆಯನ್ನು ರಕ್ಷಿಸಿದರು ಎನ್ನುತ್ತಾರವರು.
ಹತ್ತಾರು ಸಾವು
ಸಾಮಾನ್ಯವಾಗಿ ಮೀನುಗಾರಿಕೆ ಎಂದರೆ ಬಲೆ ಅಥವಾ ಗಾಳ ಹಾಕಿ ಮೀನು ಹಿಡಿಯಲಾಗುತ್ತದೆ. ಆದರೆ, ಚಿಪ್ಪಿಕಲ್ಲುಗಳನ್ನು ನೀರಿನಲ್ಲಿ ಮುಳುಗಿ ತೆಗೆಯಲಾಗುತ್ತದೆ. ನದಿಯೊಳಗಿರುವ ಕಲ್ಲಿಗೆ ಅಥವಾ ನೆಲಕ್ಕೆ ಅಂಟಿಕೊAಡಿರುವ ಚಿಪ್ಪಿಗಳನ್ನು ಕತ್ತಿಯಿಂದ ಬಿಡಿಸಿ ತಾವು ತಂದ ಬುಟ್ಟಿಗೆ ಕಾರ್ಮಿಕರು ತುಂಬುತ್ತಾರೆ.
ನದಿಯ ನೀರಿನಲ್ಲಿ ಹೊಂಡ, ತಗ್ಗುಗಳಿರುತ್ತವೆ. ಕಲ್ಲು, ಹೂಳಿರುತ್ತದೆ. ಆದರೆ, ಎಲ್ಲವನ್ನೂ ಲೆಕ್ಕಿಸದೇ ಜೀವ ಪಣಕ್ಕಿಟ್ಟು ಚಿಪ್ಪಿ ಕಲ್ಲು ತೆಗೆಯಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಅವಗಢಗಳು ಸಂಭವಿಸುತ್ತವೆ. ಕಳೆದ ಒಂದು ದಶಕಗಳಲ್ಲಿ ಹೀಗೆ ಚಿಪ್ಪಿ ಕಲ್ಲು ಸಂಗ್ರಹಿಸಲು ಹೋದವರು ಮೃತಪಟ್ಟ 30 ಕ್ಕೂ ಅಽಕ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಂದು, ಎರಡು ಸಾವುಗಳು ಆಗುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಚಿಪ್ಪಿಕಲ್ಲಿಗಾಗಿ ಇಷ್ಟು ದೊಡ್ಡ ಸಂಖ್ಯೆಯ ದುರಂತ ಸಂಭವಿಸಿದೆ.
"
ನಮ್ಮ ಭಟ್ಕಳದ ಇತಿಹಾಸದಲ್ಲಿ ಎಂದೂ ಕೇಳರಿಯದ ದುರಂತವಿದು. ಮೃತರ ಕುಟುಂಬದವರ ಜೊತೆ ನಮ್ಮ ಕರ್ನಾಟಕ ಸರ್ಕಾರ ನಿಲ್ಲುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಧನ ಸಹಾಯ ಘೋಷಿಸಿದ್ದಾರೆ. ಅಸ್ವಸ್ತರಾದವರ ಆಸ್ಪತ್ರೆಯ ಸಂಪೂರ್ಣ ಖರ್ಚನ್ನೂ ಸರ್ಕಾರವೇ ಭರಿಸಲಿದೆ.
ಮಂಕಾಳ ಎಸ್. ವೈದ್ಯ ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ